Home ದಾವಣಗೆರೆ ಭಾರತ ಸೇರಿ 7 ದೇಶಗಳ ಮೇಲೆ ಶೇ. 25 ರಷ್ಟು ಸುಂಕ ಹೇರಲು ಅಮೆರಿಕ ಪ್ರಸ್ತಾಪದ ಶಾಕ್: ಚೀನಾಕ್ಕೆ ಶೇ. 40 ರಷ್ಟು ಬರೆ!!
ದಾವಣಗೆರೆಬೆಂಗಳೂರುವಾಣಿಜ್ಯ

ಭಾರತ ಸೇರಿ 7 ದೇಶಗಳ ಮೇಲೆ ಶೇ. 25 ರಷ್ಟು ಸುಂಕ ಹೇರಲು ಅಮೆರಿಕ ಪ್ರಸ್ತಾಪದ ಶಾಕ್: ಚೀನಾಕ್ಕೆ ಶೇ. 40 ರಷ್ಟು ಬರೆ!!

Share
ಭಾರತ
Share

ವಾಷಿಂಗ್ಟನ್: ಜಾಗತಿಕ ವ್ಯಾಪಾರ ವಲಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತ ಸೇರಿದಂತೆ 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಸರಕುಗಳ ಮೇಲೆ ಹೊಸದಾಗಿ ಆಮದು ಸುಂಕ (Tariffs) ವಿಧಿಸಲು ಪ್ರಸ್ತಾಪಿಸಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಬಿಡುಗಡೆ ಮಾಡಿರುವ ನೂತನ ಯೋಜನೆಯಡಿ ಭಾರತ, ಕಾಂಬೋಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಮತ್ತು ಥೈಲ್ಯಾಂಡ್ ದೇಶಗಳ ಸರಕುಗಳ ಮೇಲೆ ಶೇ. 25 ರವರೆಗೆ ಸುಂಕ ವಿಧಿಸಲು ಮುಂದಾಗಿದ್ದರೆ, ಚೀನಾದ ಮೇಲೆ ಗರಿಷ್ಠ ಶೇ. 40 ರಷ್ಟು ಸುಂಕದ ಬರೆ ಎಳೆಯಲು ನಿರ್ಧರಿಸಲಾಗಿದೆ.

ಕಳೆದ ಎಂಟು ತಿಂಗಳ ಕಾಲ 16 ಆರ್ಥಿಕತೆಗಳ ಅನ್ಯಾಯದ ವ್ಯಾಪಾರ ನೀತಿಗಳ ಕುರಿತು ಸೆಕ್ಷನ್ 301 ರ ಅಡಿಯಲ್ಲಿ ನಡೆಸಿದ ತನಿಖೆಯ ಬೆನ್ನಲ್ಲೇ ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

ಈ ದೇಶಗಳು ಸರ್ಕಾರದ ಸಬ್ಸಿಡಿ ಮತ್ತು ಕೈಗಾರಿಕಾ ನೀತಿಗಳ ಮೂಲಕ ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದು, ಅಗ್ಗದ ದರದಲ್ಲಿ ಸರಕುಗಳನ್ನು ಪೂರೈಸುವ ಮೂಲಕ ಅಮೆರಿಕದ ಸ್ಥಳೀಯ ಉದ್ಯಮಗಳಿಗೆ ಹೊಡೆತ ನೀಡುತ್ತಿವೆ ಎಂದು ವಾಷಿಂಗ್ಟನ್ ಗಂಭೀರ ಆರೋಪ ಮಾಡಿದೆ.

2026ರ ಫೆಬ್ರವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಈ ಹಿಂದಿನ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ನಂತರ, ಟ್ರಂಪ್ ಆಡಳಿತವು ತನ್ನ ಸುಂಕ ನೀತಿಯನ್ನು ಮರುಸ್ಥಾಪಿಸಲು ಈ ಹೊಸ ಕ್ರಮಕ್ಕೆ ಮುಂದಾಗಿದೆ.

ಭಾರತ ಮತ್ತು ಏಷ್ಯಾ ರಾಷ್ಟ್ರಗಳಿಗೆ ಶೇ. 25 ಸುಂಕ: ಭಾರತ, ದಕ್ಷಿಣ ಕೊರಿಯಾ, ತೈವಾನ್, ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಕಾಂಬೋಡಿಯಾ ದೇಶಗಳ ಆಯ್ದ ಸರಕುಗಳ ಮೇಲೆ ಶೇ. 25 ರವರೆಗೆ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟರೆ ಈ ದರ ಶೇ. 17 ಕ್ಕೆ ಇಳಿಯುವ ಸಾಧ್ಯತೆಯಿದೆ.

ಚೀನಾಗೆ ಗರಿಷ್ಠ ಹೊಡೆತ: ಚೀನಾದ ಸರಕುಗಳ ಮೇಲೆ ಈಗಾಗಲೇ ಇರುವ ಸುಂಕದ ಜೊತೆಗೆ ಹೆಚ್ಚುವರಿಯಾಗಿ ಶೇ. 20 ರಷ್ಟು ಸುಂಕ ಹೇರಲಿದ್ದು, ಒಟ್ಟಾರೆ ಸುಂಕದ ಪ್ರಮಾಣ ಶೇ. 40 ರಷ್ಟಾಗಲಿದೆ. ಯುರೋಪಿಯನ್ ಒಕ್ಕೂಟ (EU) ಮತ್ತು ಜಪಾನ್ ಸೇರಿದಂತೆ ಇತರ ದೇಶಗಳಿಗೆ ಶೇ. 15 ರಿಂದ 20 ರವರೆಗೆ ಸುಂಕ ನಿಗದಿಪಡಿಸಲಾಗಿದೆ.

ವಿನಾಯಿತಿ ಮತ್ತು ವ್ಯಾಪಾರ ಒಪ್ಪಂದದ ಷರತ್ತು: ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋಮೊಬೈಲ್ ಕ್ಷೇತ್ರಗಳಿಗೆ ಈಗಾಗಲೇ ರಾಷ್ಟ್ರೀಯ ಭದ್ರತಾ ಸುಂಕ ಅನ್ವಯವಾಗುತ್ತಿರುವುದರಿಂದ ಅವುಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ. ಆಯಾ ದೇಶಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ಮಿತಿಯೊಳಗೆ ಸುಂಕ ಇರಲಿದೆ ಎಂದು ಅಮೆರಿಕ ತಿಳಿಸಿದ್ದರೂ, ಭಾರತದೊಂದಿಗೆ ಇನ್ನೂ ಅಂತಿಮ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಏರ್ಪಟ್ಟಿಲ್ಲ ಎಂಬುದು ಗಮನಾರ್ಹ.

ಈ ಹೊಸ ಸುಂಕಗಳು ತಕ್ಷಣದಿಂದಲೇ ಜಾರಿಗೆ ಬರುವುದಿಲ್ಲ. ಸೆಕ್ಷನ್ 301 ನಿಯಮಾವಳಿಗಳ ಪ್ರಕಾರ, ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ಸಾರ್ವಜನಿಕ ಅಧಿಸೂಚನೆ ಹೊರಡಿಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಮತ್ತು ವಿಚಾರಣೆ ನಡೆಸಿದ ನಂತರವಷ್ಟೇ (ಮುಂದಿನ ವರ್ಷದ ಜನವರಿ ವೇಳೆಗೆ) ಅಂತಿಮ ದರಗಳನ್ನು ಜಾರಿಗೊಳಿಸಲಿದೆ. ಈ ಬೆಳವಣಿಗೆಯು ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳ ಮೇಲೆ ಹೊಸ ಸವಾಲನ್ನು ತಂದೊಡ್ಡಿದೆ.

Share

Recent Posts

Recent Comments

No comments to show.
Related Articles