
ನವದೆಹಲಿ: ಕೈಗಾರಿಕಾ ಸಬ್ಸಿಡಿಗಳು ಮತ್ತು ಸರ್ಕಾರದ ಆರ್ಥಿಕ ನೆರವಿನ ಆರೋಪದ ಹಿನ್ನೆಲೆಯಲ್ಲಿ ಭಾರತ ಹಾಗೂ ಇತರ 15 ಪ್ರಮುಖ ಆರ್ಥಿಕತೆಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಸಜ್ಜಾಗಿದೆ. ‘
ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಾರ, ವಿದೇಶಿ ತಯಾರಕರಿಗೆ ಅನ್ಯಾಯದ ಅನುಕೂಲ ಕಲ್ಪಿಸುತ್ತಿವೆ ಎಂಬ ಕಾರಣಕ್ಕೆ ಚೀನಾ, ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳನ್ನು ಗುರಿಯಾಗಿಸಿ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ನಡೆಯುತ್ತಿರುವ ಈ ಸೂಕ್ಷ್ಮ ಸಮಯದಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಅಮೆರಿಕದ ಸುಪ್ರೀಂ ಕೋರ್ಟ್ ಹಿಂದಿನ ಸುಂಕ ನೀತಿಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಈ ವಾರದಲ್ಲೇ ಹೊಸ ತನಿಖೆಯ ವರದಿ ಮತ್ತು ಸುಂಕ ಪ್ರಕಟಿಸುವ ಸಾಧ್ಯತೆಯಿದೆ. ಭಾರತ ಮತ್ತು ವಿಯೆಟ್ನಾಂ ದೇಶಗಳ ಮೇಲಿನ ಸುಂಕವು ಇತರ ದೇಶಗಳಿಗೆ ಹೋಲಿಸಿದರೆ ತುಸು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೊಸ ಸುಂಕ ನೀತಿಯ ಅಸ್ಪಷ್ಟತೆಯಿಂದಾಗಿ ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.
ಸುಂಕದ ಎಚ್ಚರಿಕೆ ಕಾರಣ: ದೇಶೀಯ ಕೈಗಾರಿಕೆಗಳಿಗೆ ಸಬ್ಸಿಡಿ ನೀಡುವುದರ ಮೂಲಕ ವಿದೇಶಿ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ ಮತ್ತು ಇದು ಅಮೆರಿಕದ ವ್ಯಾಪಾರಕ್ಕೆ ಹಿನ್ನಡೆ ಉಂಟುಮಾಡುತ್ತಿದೆ ಎಂಬುದು ವಾಷಿಂಗ್ಟನ್ ವಾದ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಹಿನ್ನಡೆ: ಫೆಬ್ರವರಿ 2026 ರಲ್ಲಿ ಘೋಷಿಸಲಾಗಿದ್ದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು, ಯುಎಸ್ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಹೊಸ ಸುಂಕ ರಚನೆಯ (Tariff architecture) ಕಾರಣದಿಂದ ಪ್ರಸ್ತುತ ವಿಳಂಬವಾಗಿದೆ.
ಸೆಕ್ಷನ್ 301 ತನಿಖೆ: ಅನ್ಯಾಯದ ವ್ಯಾಪಾರ ಪದ್ಧತಿಗಳು ಮತ್ತು ಕೈಗಾರಿಕಾ ಅಧಿಕ ಉತ್ಪಾದನೆಯ ಕುರಿತು ಅಮೆರಿಕ ನಡೆಸುತ್ತಿರುವ ಸೆಕ್ಷನ್ 301 ತನಿಖೆಯ ಅಂತಿಮ ಫಲಿತಾಂಶಕ್ಕಾಗಿ ಭಾರತವು ಎದುರು ನೋಡುತ್ತಿದೆ.




