
ಪಟ್ನಾ (ಬಿಹಾರ): ಅನೈತಿಕ ಸಂಬಂಧಗಳ ಕಾರಣದಿಂದ ದಾಂಪತ್ಯ ಜೀವನದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಬಿಹಾರದ ಪಟ್ನಾದಲ್ಲಿ ನಡೆದಿರುವ ಇಂತಹದ್ದೇ ಒಂದು ಅಪರೂಪದ ಹಾಗೂ ಅಚ್ಚರಿಯ ಪ್ರಕರಣ ಎಲ್ಲರ ಗಮನ ಸೆಳೆದಿದೆ. ಪತ್ನಿಯ ಪರಪುರುಷನೊಂದಿನ ನಂಟಿನಿಂದ ಬೇಸತ್ತ ಪತಿಯೊಬ್ಬ, ಜಗಳವಾಡದೆ ಅತ್ಯಂತ ತಾಳ್ಮೆಯಿಂದ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ, ಪತ್ನಿಯನ್ನು ಪ್ರಿಯಕರನ ಕೈಗೆ ಒಪ್ಪಿಸಿ ಕಳುಹಿಸಿರುವ ಘಟನೆ ನಡೆದಿದೆ.
ಪತ್ನಿ ಗುಟ್ಟಾಗಿ ಬೇರೊಬ್ಬ ಯುವಕನೊಂದಿಗೆ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುವುದನ್ನು ಪತಿ ಪತ್ತೆಹಚ್ಚಿದ್ದನು. ಈ ವಿಚಾರವಾಗಿ ನಿತ್ಯ ಜಗಳವಾಡುವ ಬದಲು, ಕುಟುಂಬಸ್ಥರು ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಕರೆದು ವಿಶಿಷ್ಟ ತೀರ್ಮಾನ ಕೈಗೊಳ್ಳಲಾಗಿದೆ.
ದೇವಾಲಯದ ಬಳಿ ವಿಚಿತ್ರ ವಿದಾಯ: ಪಂಚಾಯಿತಿಯ ತೀರ್ಮಾನದಂತೆ ದೇವಾಲಯದ ಆವರಣದಲ್ಲಿ ಪತ್ನಿಯ ಕುತ್ತಿಗೆಯಲ್ಲಿದ್ದ ತಾಳಿಯನ್ನು ತೆಗೆಯಲಾಗಿದೆ. ಬಳಿಕ ಪತಿಯು ತನ್ನ ಪತ್ನಿಯ ಎಡಗೈಯನ್ನು ಹಿಡಿದು, ಆಕೆಯ ಪ್ರಿಯಕರನ ಕೈಗೆ ಇಟ್ಟು ವಿವಾಹ ಮಾಡಿಕೊಟ್ಟಂತೆ ವಿಭಿನ್ನವಾಗಿ ಬೀಳ್ಕೊಟ್ಟಿದ್ದಾನೆ.
ಹಣ ನೀಡಿ ಆಶೀರ್ವಾದ: ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂದು ನವಜೋಡಿಗೆ ಸ್ವಲ್ಪ ಹಣವನ್ನು ನೀಡಿ ಆಶೀರ್ವದಿಸಿ ಕಳುಹಿಸಲಾಗಿದೆ.
ಪತಿಯ ನಿರಾಳ ನುಡಿ: ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಿಟ್ಟುಸಿರು ಬಿಟ್ಟ ಪತಿ, “ಇನ್ನು ಮುಂದೆ ನಾನು ಯಾವುದೇ ಚಿಂತೆಯಿಲ್ಲದೆ ನೆಮ್ಮದಿಯಾಗಿ ಕಣ್ಣುತುಂಬಾ ನಿದ್ದೆ ಮಾಡುತ್ತೇನೆ” ಎಂದು ಹೇಳಿರುವುದು ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.




