
ಬೆಂಗಳೂರು: ಪ್ರಿಯತಮೆ ಜೊತೆಗಿನ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಯುವತಿಯ ತಂದೆ ಹಾಗೂ ಸಂಬಂಧಿಕರ ಮೇಲೆ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿರುವ ಘಟನೆ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆದಿದೆ.
ನವೆಂಬರ್ 20 ರಂದು ಸಂಜೆ 6 ಗಂಟೆ ಸುಮಾರಿಗೆ ವಿನಾಯಕ ನಗರದ ರಿಜ್ವಾನ್ ಮಸ್ಜಿದ್ ರಸ್ತೆಯಲ್ಲಿರುವ ‘ಯೂನಿಕ್ ಸೇಲ್ಸ್’ ಬಟ್ಟೆ ಅಂಗಡಿಯಲ್ಲಿ ಈ ಘಟನೆ ಜರುಗಿದೆ.
ಸೈಯದ್ ಅಮೀನ್ ಎಂಬಾತ ಹಾಗೂ ಆತನ ಸ್ನೇಹಿತ ಅಫಾನ್ ಮತ್ತು ಇಬ್ಬರು ಅಪರಿಚಿತರು ಸ್ಕೂಟರ್‌ನಲ್ಲಿ ಬಂದು ಅಂಗಡಿಯಲ್ಲಿದ್ದ ಆರ್. ಅಜ್ಮದ್ ಪಾಶಾ ಅವರ ಮಗ ಇಮಾನ್ ಉರ್ ರೆಹಮಾನ್ ಹಾಗೂ ಸೋದರಳಿಯಂದಿರಾದ ಮೊಹಮ್ಮದ್ ಜೈದ್ ಮತ್ತು ಹಫೀಜುಲ್ಲಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ತಡೆಯಲು ಬಂದ ಅಜ್ಮದ್ ಪಾಶಾ ಅವರ ಮೇಲೆ ಅಫಾನ್ ಗನ್ ತೆಗೆದು ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಪಾಶಾ ಅವರು ಗನ್ ಅನ್ನು ಕಸಿದುಕೊಳ್ಳಲು ಯತ್ನಿಸಿದಾಗ ಒಂದು ಬುಲೆಟ್ ಕೆಳಗೆ ಬಿದ್ದಿದೆ. ಬಳಿಕ ಆರೋಪಿಗಳು ಗನ್ ಅನ್ನು ಮರಳಿ ಪಡೆದು ಅಲ್ಲಿಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ.
ಘಟನೆಯ ಹಿನ್ನೆಲೆ: ಸೈಯದ್ ಅಮೀನ್ ಮತ್ತು ಅಜ್ಮದ್ ಪಾಶಾ ಅವರ ಎರಡನೇ ಮಗಳು ಉಮಾ ಐಮನ್ ನಡುವಿನ ಪ್ರೀತಿ-ಪ್ರೇಮದ ವಿಚಾರ ಹಾಗೂ ವಿವಾದವೇ ಈ ಹಲ್ಲೆ ಹಾಗೂ ಗುಂಡಿನ ದಾಳಿ ಯತ್ನಕ್ಕೆ ಕಾರಣವಾಗಿದೆ. ನವೆಂಬರ್ 18 ರಂದು ಇವರ ನಡುವೆ ಮಾತುಕತೆಯೂ ನಡೆದಿತ್ತು.
ಪೊಲೀಸ್ ತನಿಖೆ ಮತ್ತು ಪ್ರಕರಣ ದಾಖಲು: ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಸೈಯದ್ ಅಮೀನ್, ಅಫಾನ್ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109, 115(2) ಜೊತೆಗೆ 3(5) ಹಾಗೂ ಆರ್ಮ್ಸ್ ಆಕ್ಟ್ ಸೆಕ್ಷನ್ 27(1) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಪ್ರಾಣಾಪಾಯದಿಂದ ಪಾರು: ಸ್ಥಳೀಯರು ಮತ್ತು ಕುಟುಂಬಸ್ಥರು ದಿಟ್ಟತನ ಪ್ರದರ್ಶಿಸಿ ಎದುರು ನಿಂತಿದ್ದರಿಂದ ದೊಡ್ಡ ಮಟ್ಟದ ಅಪಾಯ ತಪ್ಪಿದಂತಾಗಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.




