
ಹೊಸ ದೆಹಲಿ: 1970ರ ದಶಕದ ಮಾರುತಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗಂಭೀರ ಆರೋಪ ಮಾಡಿದ್ದಾರೆ.
ಸೋನಿಯಾ ಗಾಂಧಿ ಅವರು ಆ ಸಮಯದಲ್ಲಿ ವಿದೇಶಿ ಪ್ರಜೆಯಾಗಿದ್ದರೂ ‘ಮಾರುತಿ ಟೆಕ್ನಿಕಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್’ (MTS) ಕಂಪನಿಯ ನಿರ್ದೇಶಕಿ ಮತ್ತು ಷೇರುದಾರರಾಗಿದ್ದರು ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಅಂದಿನ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಕಡೆಯಿಂದ ಈ ಕಂಪನಿಗೆ ವಿಶೇಷ ಒಲವು ಹಾಗೂ ಆದ್ಯತೆ ನೀಡಲಾಗಿತ್ತು ಎಂದು ದುಬೆ ದೂರಿದ್ದಾರೆ.
ಎಕ್ಸ್ ವೇದಿಕೆಯಲ್ಲಿ ‘ಕಾಂಗ್ರೆಸ್‌ನ ಕರಾಳ ಅಧ್ಯಾಯ’ ಎಂಬ ಸರಣಿಯ 250ನೇ ಕಂತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿರುವ ನಿಶಿಕಾಂತ್ ದುಬೆ, ವಿದೇಶಿ ಪ್ರಜೆಯೊಬ್ಬರು ಭಾರತೀಯ ಕಂಪನಿಯ ನಿರ್ದೇಶಕರಾಗಲು ನಿಯಮಗಳು ಅವಕಾಶ ನೀಡದಿದ್ದರೂ, ಸೋನಿಯಾ ಗಾಂಧಿ ಹೇಗೆ ನಿರ್ದೇಶಕರಾದರು ಎಂದು ಪ್ರಶ್ನಿಸಿದ್ದಾರೆ. ಸಂಜಯ್ ಗಾಂಧಿ ಅವರು ನವೆಂಬರ್ 21, 1970ರಂದು ಸೋನಿಯಾ ಗಾಂಧಿ ಅವರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದೂ ಅವರು ತಿಳಿಸಿದ್ದಾರೆ.
ವಿದೇಶಿ ಪ್ರಜೆಗೆ ನಿರ್ದೇಶಕ ಸ್ಥಾನದ ಆರೋಪ: ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದರೂ ಮಾರುತಿ ಕಂಪನಿಯ 50% ಷೇರುದಾರರಾಗಿದ್ದರು ಮತ್ತು ಎಂಡಿ ಆಗಿದ್ದರು. ಅಂದಿನ ಭಾರತ ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ವಿದೇಶಿ ಪ್ರಜೆ ಭಾರತೀಯ ಕಂಪನಿಯ ನಿರ್ದೇಶಕರಾಗಲು ಬರುವುದಿಲ್ಲ ಎಂದು ದುಬೆ ಪ್ರಶ್ನಿಸಿದ್ದಾರೆ.
ಸರ್ಕಾರಿ ಪ್ರಭಾವ ಮತ್ತು ಒಪ್ಪಂದಗಳು: ಮಾರುತಿ ಕಂಪನಿ ಅಧಿಕೃತವಾಗಿ ಸ್ಥಾಪನೆಯಾಗುವ ಮುನ್ನವೇ 1968ರಲ್ಲಿ ಭಾರತ ಸರ್ಕಾರದಿಂದ ಕಾರು ಉತ್ಪಾದನೆಗೆ ಅನುಮತಿ ಪತ್ರ ಪಡೆದಿತ್ತು. 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂಪುಟ ಆದೇಶದ ಮೂಲಕ ಸೊಸೆ ಸೋನಿಯಾ ಗಾಂಧಿ ಅವರ ಕಂಪನಿಗೆ ಕಾರು ತಯಾರಿಸಲು ಅನುಮತಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಭೂಮಿ ಹಂಚಿಕೆ ಮತ್ತು ಸಾಲ ಸೌಲಭ್ಯ: ಹರಿಯಾಣ ಸರ್ಕಾರದ ನಿಯಮಗಳ ಪ್ರಕಾರ ವಿದೇಶಿ ಪ್ರಜೆಯ ಹೆಸರಿನಲ್ಲಿ ಭೂಮಿ ಮಂಜೂರು ಮಾಡಲು ಅವಕಾಶವಿಲ್ಲದಿದ್ದರೂ, 1970ರಲ್ಲಿ ಸೋನಿಯಾ ಗಾಂಧಿ ಅವರಿಗೆ ಭೂಮಿ ನೀಡಲಾಗಿತ್ತು. ಗಾಂಧಿ ಕುಟುಂಬದ ಕಂಪನಿಗಳಿಗೆ ಸಾಲ ನೀಡುವ ಸಲುವಾಗಿಯೇ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಲಾಯಿತೇ ಎಂದು ದುಬೆ ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯದ (PMO) ದುರ್ಬಳಕೆ: ಪ್ರಧಾನಿ ಕಚೇರಿಯಲ್ಲೇ ಖಾಸಗಿ ಕಂಪನಿಯ ಕಚೇರಿಯನ್ನು ತೆರೆಯಲಾಗಿತ್ತು ಹಾಗೂ ಇಂದಿರಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಆರ್‌ಕೆ ಧವನ್ ಅವರು ಇದರ ನಿರ್ದೇಶಕರಾಗಿದ್ದರು ಎಂದು ಗಂಭೀರ ಆರೋಪ ಮಾಡಲಾಗಿದೆ.
ಯಾವುದೇ ದೊಡ್ಡ ವೈಯಕ್ತಿಕ ಬಂಡವಾಳ ಹೂಡಿಕೆ ಮಾಡದೆ ಗಾಂಧಿ ಕುಟುಂಬವು ಬೃಹತ್ ವ್ಯಾಪಾರ ಉದ್ಯಮವನ್ನು ಹೇಗೆ ನಿರ್ಮಿಸಿತು ಮತ್ತು ಸರ್ಕಾರದಿಂದ ಹೇಗೆ ವಿಶೇಷ ಅನುಕೂಲಗಳನ್ನು ಪಡೆಯಿತು ಎಂಬುದರ ಬಗ್ಗೆ ಸೋನಿಯಾ ಗಾಂಧಿ ಅವರು ಸ್ಪಷ್ಟನೆ ನೀಡಬೇಕು ಎಂದು ದುಬೆ ಸವಾಲು ಹಾಕಿದ್ದಾರೆ.




