
ಮುಂಬೈ: ಬಾಕ್ಸ್ ಆಫೀಸ್ನಲ್ಲಿ ತನ್ನ ಮುಂಬರುವ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಹಾಗೂ ಶ್ರದ್ಧಾ ಕಪೂರ್ ಅವರ ‘ಈಥಾ’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದಕ್ಕೆ ನಟ ಸಲ್ಮಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 4, 2026 ರಂದು ಎರಡು ಸಿನಿಮಾಗಳು ಏಕಕಾಲಕ್ಕೆ ತೆರೆಕಾಣುತ್ತಿರುವುದು ತನಗೆ ಮೊದಲು ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಸಲ್ಮಾನ್, ಈ ಬಗ್ಗೆ ಸ್ವತಃ ಶ್ರದ್ಧಾ ಕಪೂರ್ ಅವರಿಗೆ ಕರೆ ಮಾಡಿ ಕ್ಷಮೆಯಾಚಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.
ಎಬಿಪಿ ನ್ಯೂಸ್ ಜತೆಗೆ ಮಾತನಾಡಿದ ಸಲ್ಮಾನ್ ಖಾನ್, ಶ್ರದ್ಧಾ ಅವರ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ತಿಳಿದಿದ್ದರೆ ತಾನು ಆ ದಿನದಂದು ಸಿನಿಮಾವನ್ನು ಬಿಡುಗಡೆ ಮಾಡುತ್ತಿರಲಿಲ್ಲ ಎಂದಿದ್ದಾರೆ. ಸಣ್ಣ ವಯಸ್ಸಿನಿಂದಲೂ ಶ್ರದ್ಧಾ ಅವರನ್ನು ಬೆಳೆಯುತ್ತ ನೋಡಿರುವುದಾಗಿ ತಿಳಿಸಿರುವ ಅವರು, ಫೋನ್ ಮಾಡಿ “ನನಗೆ ಗೊತ್ತಿರಲಿಲ್ಲ, ಕ್ಷಮಿಸಿ” ಎಂದು ನೇರವಾಗಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಶ್ರದ್ಧಾ ಕಪೂರ್, ಬಾಕ್ಸ್ ಆಫೀಸ್ನಲ್ಲಿ ಎರಡೂ ಸಿನಿಮಾಗಳಿಗೂ ಸಾಕಷ್ಟು ಅವಕಾಶವಿದೆ ಎಂದು ಸಮಾಧಾನಪಡಿಸಿದ್ದಾರೆ ಎಂದು ಸಲ್ಮಾನ್ ಮೆಚ್ಚುಘಿ ವ್ಯಕ್ತಪಡಿಸಿದ್ದಾರೆ.
ಬಾಕ್ಸ್ ಆಫೀಸ್ ಮುಖಾಮುಖಿ:
ಸಲ್ಮಾನ್ ಖಾನ್ ಅಭಿನಯದ ಯುದ್ಧದ ಕಥೆಯುಳ್ಳ ‘ಮಾತೃಭೂಮಿ’ ಹಾಗೂ ಶ್ರದ್ಧಾ ಕಪೂರ್ ನಟನೆಯ ಬಯೋಪಿಕ್ ಚಿತ್ರ ‘ಈಥಾ’ ಡಿಸೆಂಬರ್ 4, 2026ರಂದು ಒಟ್ಟಿಗೆ ಬಿಡುಗಡೆಯಾಗುತ್ತಿವೆ.
ಸಲ್ಮಾನ್ ಖಾನ್ ಸ್ಪಷ್ಟನೆ:
ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವಾಗ ಶ್ರದ್ಧಾ ಸಿನಿಮಾ ಬಗ್ಗೆ ತನಗೆ ಮಾಹಿತಿ ಇರಲಿಲ್ಲವೆಂದೂ, ವಿಷಯ ತಿಳಿಯುತ್ತಿದ್ದಂತೆ ಖುದ್ದಾಗಿ ಫೋನ್ ಮಾಡಿ ಕ್ಷಮೆ ಕೋರಿದ್ದಾಗಿ ಸಲ್ಮಾನ್ ತಿಳಿಸಿದ್ದಾರೆ.
ಚಿತ್ರಗಳ ಹಿನ್ನೆಲೆ:
ಗಲ್ವಾನ್ ಕಣಿವೆಯ ನೈಜ ಘಟನೆ ಆಧರಿಸಿದ ‘ಮಾತೃಭೂಮಿ’ ಚಿತ್ರದಲ್ಲಿ ಕರ್ನಲ್ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ನಟಿಸಿದ್ದರೆ, ಮಹಾರಾಷ್ಟ್ರದ ಪ್ರಸಿದ್ಧ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಜೀವನಚರಿತ್ರೆಯ ಆಧರಿತ ‘ಈಥಾ’ ಚಿತ್ರದಲ್ಲಿ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಪರಸ್ಪರ ಬೆಂಬಲ:
ಎರಡೂ ಚಿತ್ರಗಳು ಯಶಸ್ವಿಯಾಗಲಿ ಎಂದು ಹಾರೈಸಿರುವ ಸಲ್ಮಾನ್ ಖಾನ್, ಪ್ರೇಕ್ಷಕರು ತಪ್ಪದೇ ಶ್ರದ್ಧಾ ಅವರ ‘ಈಥಾ’ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.




