
ಕೋಲ್ಕತ್ತಾ: ದಕ್ಷಿಣ ರೈಲ್ವೆ ಬೆನ್ನಲ್ಲೇ ಇದೀಗ ಪೂರ್ವ ರೈಲ್ವೆ ಕೂಡ ರೈಲು ಪ್ರಯಾಣಿಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ರೈಲು ಬೋಗಿಗಳು ಹಾಗೂ ನಿಲ್ದಾಣದ ಆವರಣದಲ್ಲಿ ಮೊಬೈಲ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡು ಅಥವಾ ವಿಡಿಯೋಗಳನ್ನು ಪ್ಲೇ ಮಾಡುವುದು, ಗಟ್ಟಿಯಾಗಿ ದೀರ್ಘಕಾಲ ಫೋನ್‌ನಲ್ಲಿ ಮಾತನಾಡುವುದು ಹಾಗೂ ಹೆಚ್ಚಿನ ಶಬ್ದದ ರಿಂಗ್‌ಟೋನ್‌ಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ ಸಹಪ್ರಯಾಣಿಕರಿಗೆ ತೊಂದರೆ ನೀಡಿದರೆ ₹1,000 ವರೆಗೆ ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ರೈಲ್ವೆ ಇಲಾಖೆ ಎಚ್ಚರಿಸಿದೆ.
ರೈಲ್ವೆ ಮಂಡಳಿಯ (Railway Board) ಮಾರ್ಗಸೂಚಿಯ ಅನ್ವಯ, ಕೋಲ್ಕತ್ತಾ ಕೇಂದ್ರ ಕಚೇರಿಯನ್ನು ಹೊಂದಿರುವ ಪೂರ್ವ ರೈಲ್ವೆಯು ತನ್ನ ವ್ಯಾಪ್ತಿಯ ಎಲ್ಲಾ ನಾಲ್ಕು ವಿಭಾಗಗಳಿಗೆ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿಶೇಷವಾಗಿ ಹವಾನಿಯಂತ್ರಿತ (AC) ಬೋಗಿಗಳಲ್ಲಿ ಇಂತಹ ಶಬ್ದ ಮಾಲಿನ್ಯದಿಂದ ಸಹಪ್ರಯಾಣಿಕರ ನೆಮ್ಮದಿಗೆ ಭಂಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಾನೂನು ಕ್ರಮದ ಎಚ್ಚರಿಕೆ: ರೈಲ್ವೆ ಕಾಯ್ದೆ 1989ರ ಸೆಕ್ಷನ್ 145ರ ಅಡಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಕೃತ್ಯಕ್ಕೆ ₹1,000 ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ, ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಟಿಟಿಇಗಳಿಗೆ ಅಧಿಕಾರ: ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಸ್ಥಳದಲ್ಲೇ ಸೂಕ್ತ ಕ್ರಮ ಕೈಗೊಳ್ಳಲು ಟಿಕೆಟ್ ತಪಾಸಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಜಾಗೃತಿ ಅಭಿಯಾನ: ಪ್ರಯಾಣಿಕರಲ್ಲಿ ಅರಿವು ಮೂಡಿಸಲು ನಿಲ್ದಾಣಗಳಲ್ಲಿ ಹಾಗೂ ರೈಲುಗಳ ಒಳಗೆ ಸ್ಥಳೀಯ ಭಾಷೆಗಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿರಂತರವಾಗಿ ಧ್ವನಿವರ್ಧಕಗಳ ಮೂಲಕ ಪ್ರಕಟಣೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.
ಪ್ರಯಾಣಿಕರು ಹಾಡು ಕೇಳುವಾಗ ಅಥವಾ ವಿಡಿಯೋ ನೋಡುವಾಗ ಕಡ್ಡಾಯವಾಗಿ ಇಯರ್‌ಫೋನ್ (Earphones) ಬಳಸಬೇಕು ಮತ್ತು ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಅಥವಾ ವೈಬ್ರೇಶನ್ ಮೋಡ್‌ನಲ್ಲಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಹಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತ ಹಾಗೂ ಸುಖಕರ ಪ್ರಯಾಣದ ಅನುಭವ ನೀಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಪೂರ್ವ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
- Eastern Railway
- Indian Railways rules
- loud music on trains
- loud phone calls in train
- railway fine and jail
- Railways Act 1989 Section 145
- Southern Railway
- train passenger rules
- ಜೈಲು ಶಿಕ್ಷೆ
- ದಕ್ಷಿಣ ರೈಲ್ವೆ
- ಪೂರ್ವ ರೈಲ್ವೆ
- ಭಾರತೀಯ ರೈಲ್ವೆ ಸುದ್ದಿ
- ಮೊಬೈಲ್ ಶಬ್ದ ನಿಷೇಧ
- ರೈಲಿನಲ್ಲಿ ಜೋರಾಗಿ ಹಾಡು
- ರೈಲು ಪ್ರಯಾಣಿಕರಿಗೆ ಎಚ್ಚರಿಕೆ
- ರೈಲ್ವೆ ಕಾಯ್ದೆ 1989
- ₹1000 ದಂಡ




