
ಉತ್ತರ ಪ್ರದೇಶ: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಂಡಕ್ಟರ್ ಬಗ್ಗೆ ಅನುಚಿತವಾಗಿ ಕಮೆಂಟ್ ಮಾಡಿದ ಯುವಕನೊಬ್ಬನಿಗೆ ಬಸ್ನಲ್ಲೇ ತಕ್ಕ ಶಾಸ್ತಿ ಮಾಡಿರುವ ಘಟನೆ ನಡೆದಿದೆ.
ಖುರ್ಜಾದಿಂದ ದೆಹಲಿಗೆ ತೆರಳುತ್ತಿದ್ದ ಯುಪಿಎಸ್ಆರ್ಟಿಸಿ ಬಸ್ನಲ್ಲಿ ಕೆಲ ಯುವಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳಾ ಕಂಡಕ್ಟರ್ ಆರತಿ ಅವರು ಟಿಕೆಟ್ ವಿತರಿಸಿ ಮುಂದೆ ಸಾಗುತ್ತಿದ್ದಂತೆ, ಗುಂಪಿನಲ್ಲಿದ್ದ ಒಬ್ಬ ಯುವಕ ತನ್ನ ಸ್ನೇಹಿತರ ಬಳಿ ಆಕೆಯ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ.
ಯುವಕ ಆಡಿದ ಮಾತು ಕಂಡಕ್ಟರ್ ಆರತಿ ಅವರ ಕಿವಿಗೆ ಬಿದ್ದಿದ್ದು, ತಕ್ಷಣವೇ ಆಕೆಯ ಕೆಂಗಣ್ಣು ಆತನತ್ತ ತಿರುಗಿದೆ. ಮಹಿಳಾ ಕಂಡಕ್ಟರ್ ಅವರ ಕಠಿಣ ಮುಖಭಾವವನ್ನು ಕಂಡ ಆ ಯುವಕನ ಧೈರ್ಯ ಕ್ಷಣಾರ್ಧದಲ್ಲೇ ನುಚ್ಚುನೂರಾಗಿದೆ. ಆತನ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಆರತಿ, “ಮರ್ಯಾದೆಯಾಗಿ ಕಿವಿಯಿಡಿದು ಬಸ್ಕಿ ಹೊಡೆ, ಇಲ್ಲವಾದರೆ ನೇರವಾಗಿ ಬಸ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಎಫ್ಐಆರ್ ದಾಖಲಿಸುತ್ತೇನೆ” ಎಂದು ಎಲ್ಲರ ಮುಂದೆಯೇ ಎಚ್ಚರಿಕೆ ನೀಡಿದ್ದಾರೆ.
ಕಾನೂನು ಕ್ರಮ ಮತ್ತು ಪೊಲೀಸರ ಭೀತಿಯಿಂದ ಕಕ್ಕಾಬಿಕ್ಕಿಯಾದ ಆ ಯುವಕ, ತಕ್ಷಣವೇ ಕಿವಿಯಿಡಿದು ಬಸ್ನಲ್ಲೇ ಬಸ್ಕಿ ಹೊಡೆಯಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ ಭಯದಿಂದ ಆಕೆಯನ್ನು ಗೌರವದಿಂದ “ದೀದಿ” (ಅಕ್ಕ) ಎಂದು ಕರೆಯುತ್ತಾ ಕ್ಷಮೆ ಕೋರಿದ್ದಾನೆ.
ಧೈರ್ಯದ ಹೆಜ್ಜೆ: ಮಹಿಳಾ ಕಂಡಕ್ಟರ್ ಆರತಿ ಅವರು ಅಸಭ್ಯ ವರ್ತನೆಯನ್ನು ಸಹಿಸಿಕೊಳ್ಳದೆ, ಪ್ರಯಾಣಿಕರ ಮುಂದೆಯೇ ಯುವಕನನ್ನು ತರಾಟೆಗೆ ತೆಗೆದುಕೊಂಡು ದಿಟ್ಟತನ ಮೆರೆದಿದ್ದಾರೆ.
ಬಸ್ನಲ್ಲೇ ಕಕ್ಕಾಬಿಕ್ಕಿಯಾದ ಯುವಕ: ಪೊಲೀಸ್ ಠಾಣೆ ಮತ್ತು ಎಫ್ಐಆರ್ ಭೀತಿಯಿಂದ ಯುವಕ ಕಿವಿಯಿಡಿದು ಗುಂಜಿ ಹೊಡೆದು, ‘ದೀದಿ’ ಎಂದು ಕರೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾನೆ.
ಮಾನವೀಯತೆ ಮೆರೆದ ಕಂಡಕ್ಟರ್: ಆತನ ವಿರುದ್ಧ ಕಾನೂನು ರೀತ್ಯಾ ಕೇಸ್ ದಾಖಲಿಸುವ ಎಲ್ಲ ಅಧಿಕಾರವಿದ್ದರೂ, ಇಂತಹ ವರ್ತನೆ ಮರುಕಳಿಸಬಾರದೆಂದು ಕಠಿಣ ಎಚ್ಚರಿಕೆ ನೀಡಿ, ಆತನಿಗೆ ಬುದ್ಧಿ ಕಲಿಸಿ ಅಲ್ಲಿಗೇ ಕ್ಷಮಿಸಿ ಕಳುಹಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಚರ್ಚೆ: ಮಹಿಳಾ ಕಂಡಕ್ಟರ್ ಆರತಿ ಅವರು ಆ ಯುವಕನಿಗೆ ಎರಡನೇ ಅವಕಾಶ ನೀಡಿ ಕ್ಷಮಿಸಿದ್ದು ಸರಿಯೇ ಅಥವಾ ಸರಿಯಾದ ಪಾಠ ಕಲಿಸಲು ಎಫ್ಐಆರ್ ದಾಖಲಿಸಬೇಕಿತ್ತೇ ಎಂಬ ಚರ್ಚೆ ವ್ಯಾಪಕವಾಗಿ ಶುರುವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮೂಲಕ ಮಹಿಳಾ ಕಂಡಕ್ಟರ್ ಆರತಿ ಅವರು ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.




