Home ದಾವಣಗೆರೆ ಎಂ. ಕೆ. ಸ್ಟಾಲಿನ್ ಸೋಲಿಸಿದ್ದ ಶಾಸಕ ವಿ.ಎಸ್. ಬಾಬು ಅಂತಿಮಯಾತ್ರೆ: ಬರಿಗಾಲಲ್ಲಿ ನಡೆದು ಪಾರ್ಥೀವ ಶರೀರ ಹೊತ್ತುಕೊಂಡು ಕಣ್ಣೀರಿಟ್ಟ ತಮಿಳುನಾಡು ಸಿಎಂ ವಿಜಯ್!
ದಾವಣಗೆರೆನವದೆಹಲಿಬೆಂಗಳೂರು

ಎಂ. ಕೆ. ಸ್ಟಾಲಿನ್ ಸೋಲಿಸಿದ್ದ ಶಾಸಕ ವಿ.ಎಸ್. ಬಾಬು ಅಂತಿಮಯಾತ್ರೆ: ಬರಿಗಾಲಲ್ಲಿ ನಡೆದು ಪಾರ್ಥೀವ ಶರೀರ ಹೊತ್ತುಕೊಂಡು ಕಣ್ಣೀರಿಟ್ಟ ತಮಿಳುನಾಡು ಸಿಎಂ ವಿಜಯ್!

Share
ವಿಜಯ್
Share

ಚೆನ್ನೈ: 2026ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿ ರಾಜಕೀಯವಾಗಿ ಸಂಚಲನ ಮೂಡಿಸಿದ್ದ ತಮಿಳು ಗಣರಿ (TVK) ಪಕ್ಷದ ಕೋಲತ್ತೂರು ಶಾಸಕ ವಿ.ಎಸ್. ಬಾಬು (75) ಅವರ ಅಂತ್ಯಕ್ರಿಯೆಯು ಚೆನ್ನೈನಲ್ಲಿ ಶ್ರದ್ಧಾಂಜಲಿಯೊಂದಿಗೆ ನೆರವೇರಿತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಬು, ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದರು. ಶುಕ್ರವಾರ ನಡೆದ ಅವರ ಅಂತಿಮಯಾತ್ರೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪಾಲ್ಗೊಂಡು, ಪಾರ್ಥೀವ ಶರೀರವನ್ನು ಹೆಗಲ ಮೇಲೆ ಹೊತ್ತು ಸುಮಾರು 2.3 ಕಿ.ಮೀ ದೂರ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಗೌರವ ಸಲ್ಲಿಸಿದರು.

ಪೆರಂಬೂರಿನಲ್ಲಿರುವ ದಿವಂಗತ ಶಾಸಕರ ನಿವಾಸದಿಂದ ಆರಂಭವಾದ ಅಂತಿಮಯಾತ್ರೆಯ ವೇಳೆ, ಮುಖ್ಯಮಂತ್ರಿ ವಿಜಯ್ ತಮ್ಮ ಪಾದರಕ್ಷೆಗಳನ್ನು ಕಳಚಿಟ್ಟು, ಬಾಬು ಅವರ ಅಂತಿಮ ನಮನ ಸಲ್ಲಿಸಿ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡರು. ಈ ಭಾವುಕ ಕ್ಷಣವು ನೆರೆದಿದ್ದ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಕಣ್ಣಾಲಿಗಳಲ್ಲಿ ನೀರು ತರಿಸಿತು.

ಬರಿಗಾಲಿನಲ್ಲಿ 2.3 ಕಿ.ಮೀ ಮೆರವಣಿಗೆ: ಮೃತದೇಹವನ್ನು ವಾಹನದಲ್ಲಿ ಇರಿಸಿದ ಬಳಿಕ, ಸಿಎಂ ವಿಜಯ್ ವಾಹನದ ಪಕ್ಕದಲ್ಲೇ ಕೈಯಿಟ್ಟುಕೊಂಡು ತಿ ವಿಕಾ ನಗರದ ವಿದ್ಯುತ್ ಶ್ಮಶಾನದವರೆಗೆ ಸುಮಾರು 2.3 ಕಿ.ಮೀ ದೂರ ಬರಿಗಾಲಿನಲ್ಲೇ ನಡೆದುಕೊಂಡು ಸಾಗಿದರು.

ಐತಿಹಾಸಿಕ ಜಯದ ನೆನಪು: ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪ್ರಬಲ ನಾಯಕ ಎಂ.ಕೆ. ಸ್ಟಾಲಿನ್ ಅವರ ಭದ್ರಕೋಟೆಯಾದ ಕೋಲತ್ತೂರು ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ವಿ.ಎಸ್. ಬಾಬು ರಾಜಕೀಯವಾಗಿ ಭಾರಿ ಗಮನ ಸೆಳೆದಿದ್ದರು.

ಗಣ್ಯರ ಭೇಟಿ ಹಾಗೂ ನಮನ: ಸೆಪ್ಟೆಂಬರ್ 9 ರಿಂದ ಆಸ್ಪತ್ರೆಯ ಐಸಿಯುನಲ್ಲಿದ್ದ ಬಾಬು ಅವರ ಅಂತಿಮಯಾತ್ರೆಯಲ್ಲಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ, ರಾಜ್ಯ ಸಚಿವರು, ಟಿವಿಕೆ ಶಾಸಕರು ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು. ಸಿಎಂ ವಿಜಯ್ ಅವರು ಮೃತರ ಕುಟುಂಬದವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು.

ಏಳು ದಿನಗಳ ಶೋಕಾಚರಣೆ: ಪಕ್ಷದ ನಿಷ್ಠಾವಂತ ಶಾಸಕರ ಅಗಲಿಕೆಯ ಗೌರವಾರ್ಥವಾಗಿ ಆಡಳಿತರೂಢ ಟಿವಿಕೆ ಪಕ್ಷವು ತಮಿಳುನಾಡುಾದ್ಯಂತ ಏಳು ದಿನಗಳ ಕಾಲ ಅಧಿಕೃತ ಶೋಕಾಚರಣೆ ಘೋಷಿಸಿದ್ದು, ಪಕ್ಷದ ಧ್ವಜಗಳನ್ನು ಅರ್ಧಕ್ಕೆ ನಮಿಸಲಾಗುವುದು ಎಂದು ತಿಳಿಸಿದೆ.

ವಿ.ಎಸ್. ಬಾಬು ಅವರ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿರುವ ನಾಯಕರು, ಮುಖ್ಯಮಂತ್ರಿ ವಿಜಯ್ ಅವರು ಕಾರ್ಯಕರ್ತರಿಗೆ ನೀಡುವ ಗೌರವ ಮತ್ತು ಬೆಂಬಲವನ್ನು ಈ ನಡೆ ಮೂಲಕ ಸಾಬೀತುಪಡಿಸಿದ್ದಾರೆ ಎಂದು ವೈಕೋ ಸೇರಿದಂತೆ ಹಲವರು ಪ್ರಶಂಸಿಸಿದ್ದಾರೆ.

Share
Related Articles