ದಾವಣಗೆರೆ: ನನ್ನದು ಬೂಟಾಟಿಕೆ ರಾಜಕಾರಣವಲ್ಲ. ರೈತರ ಪರವಾಗಿ ನಿಲ್ಲುತ್ತೇನೆ. ಕೂಡಲೇ ಭದ್ರಾ ಡ್ಯಾಂನಿಂದ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗೆ ಹರಿಸುತ್ತಿರುವ ನೀರು ಕೂಡಲೇ ನಿಲ್ಲಿಸಬೇಕು. ಐಸಿಸಿ ಸಭೆ ಕರೆದು ಚರ್ಚಿಸಿ ಆ ನಂತರ ತೀರ್ಮಾನಿಸಲಿ. ಸಂಜೆ ಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ನಾನು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಸಚಿವ ಕೆ. ಎಸ್. ಬಸವಂತಪ್ಪ ಭೇಟಿಯಾಗುತ್ತೇವೆ. ಬೇಡಿಕೆಗೆ ಸ್ಪಂದಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೊನ್ನಾಳಿ ಶಾಸಕ ಡಿ. ಜಿ. ಶಾಂತನಗೌಡ ಗುಡುಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ದಿನಗಳ ಕಾಲ ಭದ್ರಾ ಡ್ಯಾಂನಿಂದ ನೀರು ಹರಿಸಲು ಉದ್ದೇಶಿಸಿರುವುದನ್ನು ಕೂಡಲೇ ನಿಲ್ಲಿಸಬೇಕು. ಭದ್ರಾವತಿ ಶಾಸಕರೂ ಕಾಂಗ್ರೆಸ್ ನವರು. ನಾನೂ ಕಾಂಗ್ರೆಸ್ ಶಾಸಕ. ನಮಗೊಂದು ನ್ಯಾಯ,
ಅವರಿಗೊಂದು ನ್ಯಾಯನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು. ಆದರೆ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರರ ಒತ್ತಡಕ್ಕೆ ಮಣಿದು ನೀರು ಹರಿಸಲು ನಿರ್ಧರಿಸಿರುವುದು ಸರಿಯಲ್ಲ. ಇನ್ನೂ ಮಳೆಗಾಲ ಮುಗಿದಿಲ್ಲ. ಈ ತಿಂಗಳ
ಅಂತ್ಯಕ್ಕೆ ಮಳೆಗಾಲ ಮುಗಿಯುತ್ತದೆ. ಆದರೆ ನೀರು ಬಿಡುವ ಆದೇಶದಲ್ಲಿ ಬೇಸಿಗೆ ನೀರು ಎಂದು ನಮೂದಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಭದ್ರಾ ಜಲಾಶಯ ಕೇವಲ ಭದ್ರಾವತಿ ತಾಲೂಕಿನ ಸ್ವತ್ತಲ್ಲ. ಇದು ಭದ್ರಾ ಅಚ್ಚುಕಟ್ಟುದಾರರ ಸ್ವತ್ತು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹರಪನಹಳ್ಳಿ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸೇರುತ್ತದೆ. ಆದರೆ ಒತ್ತಡಕ್ಕೆ ಮಣಿದು
ನಿರ್ಧಾರ ತೆಗೆದುಕೊಂಡಿರುವುದು ಅವೈಜ್ಞಾನಿಕ ಎಂದು ಕಿಡಿಕಾರಿದರು.
ಹತ್ತು ದಿನಕ್ಕೆ 1 ಟಿಎಂಸಿ ನೀರು ಹರಿಸಿದರೆ ಹೇಗೆ? ಮುಂದಿನ ಬೇಸಿಗೆಗೆ ಏನು ಮಾಡುತ್ತಾರೆ? ಈಗಲೇ ನೀರು ಹರಿಸಿ ಖಾಲಿ ಮಾಡಿದರೆ ಈ ಭಾಗದ ರೈತರು ಏನು ಮಾಡಬೇಕು. ಮಳೆಗಾಲದ ಬೆಳೆಗೆ ನೀರು ಕೊಡಿ ಎಂದು ಹೋರಾಟ ಮಾಡಿದರೂ ನೀಡಲಿಲ್ಲ. ಬೇಸಿಗೆ ಬಂದಿಲ್ಲ. ಆಗಲೇ ಬೇಸಿಗೆ ಬೆಳೆಗೆ ನೀರು ಎಂದು ಹೇಳುತ್ತಿರುವುದು ಸರಿಯಲ್ಲ. ಈ ಕ್ಷಣದಿಂದಲೇ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರೊಟ್ಟಿಗೆ ಸೇರಿ ಹೋರಾಟ ಮಾಡುವುದಾಗಿ ಗುಡುಗಿದರು.





Leave a comment