ಬಾಗ್ಪತ್: ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ಕೃಷಿ ಜಮೀನಿನ ದಾರಿಯ ವಿಚಾರವಾಗಿ ನಡೆದ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಪೊಲೀಸ್ ಕಾನ್ಸ್ಟೇಬಲ್ ಹಾಗೂ ಆತನ ನಿವೃತ್ತ ದೆಹಲಿ ಪೊಲೀಸ್ ಎಎಸ್ಐ ತಂದೆ ಸೇರಿ ತಮ್ಮನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ವರೆದಿಯಾಗಿದೆ.
ಹಲಾಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಜೀವ್ ಖೋಖರ್ ಮೃತಪಟ್ಟ ದುರ್ದೈವಿ.
ಗ್ರಾಮದ ಮುಖ್ಯಸ್ಥ ಸುಧೀರ್ ಖೋಖರ್ ಅವರ ಸಹೋದರ ಸಂಜೀವ್ ಹಾಗೂ ಅವರ ಚಿಕ್ಕಪ್ಪನ ಕುಟುಂಬದ ನಡುವೆ ಜಮೀನಿನ ದಾರಿಯ ವಿಚಾರವಾಗಿ ಬಹಳ ದಿನಗಳಿಂದ ವಿವಾದವಿತ್ತು. ಜಮೀನಿನ ಹಾದಿಗೆ ಮರಗಳು ಅಡ್ಡಲಾಗಿ ಬಿದ್ದಿದ್ದವು. ಈ ಬಗ್ಗೆ ಸಂಜೀವ್ ಪ್ರಶ್ನಿಸಿದಾಗ, ಪೊಲೀಸ್ ಕಾನ್ಸ್ಟೇಬಲ್ ಸನ್ನಿ ಖೋಖರ್ ಹಾಗೂ ಆತನ ತಂದೆ ಉದಯರಾಜ್ ಖೋಖರ್ ಜತೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರೂ ಸೇರಿ ಸಂಜೀವ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಸಂಜೀವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರೋಪಿಗಳ ಬಂಧನ: ಕೃತ್ಯ ಎಸಗಿದ ಯುಪಿ ಪೊಲೀಸ್ ಕಾನ್ಸ್ಟೇಬಲ್ ಸನ್ನಿ ಖೋಖರ್ ಹಾಗೂ ದೆಹಲಿ ಪೊಲೀಸರ ನಿವೃತ್ತ ಎಎಸ್ಐ ಉದಯರಾಜ್ ಖೋಖರ್ ಅವರನ್ನು ಛಪ್ರಾಲಿ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೆ ಕಾರಣ: ಕೃಷಿ ಭೂಮಿಗೆ ತೆರಳುವ ದಾರಿಯಲ್ಲಿ ಬಿದ್ದಿದ್ದ ಮರಗಳು ಹಾಗೂ ದಾರಿಯ ಹಕ್ಕಿನ ವಿಚಾರವಾಗಿ ಕುಟುಂಬದ ಎರಡು ಶಾಖೆಗಳ ನಡುವೆ ದೀರ್ಘಕಾಲದಿಂದ ವಿವಾದವಿತ್ತು.
ಪೊಲೀಸ್ ತನಿಖೆ: ಮೃತನ ದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೃತ್ತ ನಿರೀಕ್ಷಕಿ ಅನ್ಶು ಜೈನ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.





Leave a comment