ದುಲಿಯಾಜನ್: ಅಸ್ಸಾಂನ ದಿಬ್ರುಗಢ ಜಿಲ್ಲೆಯ ದುಲಿಯಾಜನ್ನಲ್ಲಿ ನಿವೃತ್ತ ಆಯಿಲ್ ಇಂಡಿಯಾ ಲಿಮಿಟೆಡ್ ಅಧಿಕಾರಿಯೊಬ್ಬರು, ಅವರ ಪತ್ನಿ ಹಾಗೂ ಯುವತಿ ಪುತ್ರಿ ಮನೆಯ ವಿವಿಧ ಕೊಠಡಿಗಳಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಸೋಮವಾರ ವರದಿಯಾಗಿದೆ. ಚಂದ್ರಕಾಂತ ಭುಯಾನ್, ಅವರ ಪತ್ನಿ ಎಲಿಜಾ ಭುಯಾನ್ ಹಾಗೂ 20ರ ಹರೆಯದ ಪುತ್ರಿ ನಿಹಾರಿಕಾ ಭುಯಾನ್ ಮೃತಪಟ್ಟ ದುರ್ದೈವಿಗಳು.
ಬಾಡಿಗೆದಾರರೊಬ್ಬರು ಛತ್ ಪೂಜೆ ಪ್ರಸಾದ ನೀಡಲು ತೆರಳಿದಾಗ ಎಷ್ಟು ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದರಿಂದ ಸಂಶಯಗೊಂಡ ಅಕ್ಕಪಾಸಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಚಂದ್ರಕಾಂತ ಅವರ ಶವ ಡ್ರಾಯಿಂಗ್-ಕಮ್-ಡೈನಿಂಗ್ ರೂಮ್ನಲ್ಲಿ, ಎಲಿಜಾ ಶವ ಅಡುಗೆಮನೆಯಲ್ಲಿ ಹಾಗೂ ನಿಹಾರಿಕಾ ಶವ ಆಕೆಯ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳದಲ್ಲಿ ಸಿಕ್ಕ ಸುಳಿವುಗಳು: ಮನೆಯ ಸಿಸಿಟಿವಿ ಕ್ಯಾಮೆರಾವನ್ನು ಸಂಪರ್ಕ ಕಡಿತಗೊಳಿಸಲಾಗಿದ್ದು, ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ರಾಜಕೀಯ ಮುಖಂಡರ ಆಗ್ರಹ: ಇದು ಮೇಲ್ನೋಟಕ್ಕೆ ಕೊಲೆ ಪ್ರಕರಣದಂತೆ ಕಾಣಿಸುತ್ತಿದೆ ಎಂದು ರಾಜ್ಯಸಭಾ ಸಂಸದ ತರೇಶ್ ಗೋವಾಲಾ ತಿಳಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಪೊಲೀಸ್ ತನಿಖೆ: ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಹತ್ಯೆ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ದಿಬ್ರುಗಢ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅಭಿಜಿತ್ ಗೌರವ್ ದಿಲೀಪ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಮೃತ ನಿಹಾರಿಕಾ ಅವರು ನಾಗಾಂವ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗಷ್ಟೇ ಕುಟುಂಬವು ನೆರೆಯ ಜಿಲ್ಲೆಯಿಂದ ವಾಪಸ್ ಬಂದಿತ್ತು ಎಂದು ತಿಳಿದುಬಂದಿದೆ.





Leave a comment