ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡಿನ ಅಭಿವೃದ್ಧಿಯ ಜೀವನಾಡಿಯಾಗಿದ್ದು, ಇದರ ಉಳಿವಿಗೆ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸುಮಾರು 4.29 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆದಿದ್ದಾರೆ. ಆದರೆ, ಇಂತಹ ಮಹತ್ವದ ವಿಮಾನ ನಿಲ್ದಾಣದ ಕಮರ್ಷಿಯಲ್ ವಿಮಾನ ಸೇವೆಗಳು ಒಂದೊಂದಾಗಿ ಸ್ಥಗಿತಗೊಳ್ಳುತ್ತಿರುವುದು ಮಲೆನಾಡಿನ ಜನತೆಗೆ ಎಸಗುತ್ತಿರುವ ದೊಡ್ಡದ್ರೋಹ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಕಲಬುರಗಿ, ಬೀದರ್ ಹಾಗೂ ವಿಜಯನಗರ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುತ್ತಿರುವಂತೆ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಮೂಲಕ ನೆರವು ನೀಡಿ ವಿಮಾನ ಸಂಪರ್ಕವನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ನವೆಂಬರ್ 21 ರಿಂದ ವಿಮಾನಯಾನ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದ್ದು, ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಶಿಕ್ಷಣ-ವೈದ್ಯಕೀಯ ಕಾರಣಗಳಿಗಾಗಿ ಸಂಚರಿಸುವ ಜನರಿಗೆ ಭಾರೀ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಪ್ರೋತ್ಸಾಹ ಧನಕ್ಕೆ ಒತ್ತಾಯ: ಶಿವಮೊಗ್ಗ – ಬೆಂಗಳೂರು ನಡುವಿನ ವಿಮಾನಯಾನ ಸೇವಾದಾರರಿಗೆ ರಾಜ್ಯ ಸರ್ಕಾರವು ಅಗತ್ಯವಿರುವ ಆರ್ಥಿಕ ಪ್ರೋತ್ಸಾಹ ಧನವನ್ನು ಒದಗಿಸಬೇಕು.
ನಿರಂತರ ವಿಮಾನ ಸೇವೆ: ಕನಿಷ್ಠ ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯಾದರೂ ಯಾವುದೇ ವ್ಯತ್ಯಯವಿಲ್ಲದೆ ನಿರಂತರವಾಗಿ ಮುಂದುವರಿಯಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
ಮಲೆನಾಡಿಗೆ ಮಲತಾಯಿ ಧೋರಣೆ: ಇತರೆ ವಿಮಾನ ನಿಲ್ದಾಣಗಳಿಗೆ ನೀಡುತ್ತಿರುವ ರೀತಿಯಲ್ಲೇ ಶಿವಮೊಗ್ಗಕ್ಕೂ ನೆರವು ನೀಡಿ, ಮಲೆನಾಡಿನ ಜನರ ಮೇಲಿನ ಮಲತಾಯಿ ಧೋರಣೆಯನ್ನು ಸರ್ಕಾರ ಕೈಬಿಡಬೇಕು.
ರೈತರ ಪರಿಹಾರ ವಿಳಂಬಕ್ಕೆ ಖಂಡನೆ: ರೈತರ ಬೆಳೆ ಹಾನಿ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಎನ್‌ಡಿಆರ್‌ಎಫ್ (NDRF) ಮಾರ್ಗಸೂಚಿಯಂತೆ ಪರಿಹಾರ ಬಿಡುಗಡೆ ಮಾಡಬೇಕು.
ಮಲೆನಾಡಿನ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿಗಾಗಿ ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಸದರು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.





Leave a comment