ಚಂಡೀಗಢ: ರಾಜಸ್ಥಾನದಲ್ಲಿ ನವೆಂಬರ್ 3ರಂದು ರೈಲು ಹಳಿ ಮೇಲೆ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಗುದಾಸ್‌ಪುರ ಜಿಲ್ಲೆಯ ಮಹಾಕ್‌ದೀಪ್ ಕೌರ್ ಹಾಗೂ ದೇವಿಂದರ್ ಸಿಂಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಹೋಟೆಲ್‌ಗೆ ಮೂರು ಬಾರಿ ಭೇಟಿ ನೀಡಿದ್ದು, ಮೊಬೈಲ್ ಟವರ್ ಲೊಕೇಶನ್ ಹಾಗೂ ಪಾಕ್ ಗಡಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಕೃತ್ಯದ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಹಾಯ್ದು ಹೋದ ಕೆಲವೇ ನಿಮಿಷಗಳಲ್ಲಿ ಈ ಸ್ಫೋಟ ಸಂಭವಿಸಿದ್ದು, ಹಳಿಯಲ್ಲಿ ಎರಡು ಅಡಿಯಷ್ಟು ಆಳದ ಗುಂಡಿ ಬಿದ್ದಿತ್ತು.
ರಾಜಸ್ಥಾನದಲ್ಲಿ ಶಂಕಿತರು ಒಂದೇ ಹೋಟೆಲ್‌ಗೆ ಮೂರು ಬಾರಿ ಪ್ರತ್ಯೇಕವಾಗಿ ಭೇಟಿ ನೀಡಿ ತಂಗಿದ್ದೇ ತನಿಖಾಧಿಕಾರಿಗಳಿಗೆ ಸಿಕ್ಕ ಮೊದಲ ಮಹತ್ವದ ಸುಳುವಾಗಿದೆ. ಇದರ ಆಧಾರದ ಮೇಲೆ ಪ್ರಯಾಣದ ವಿವರ ಕಲೆಹಾಕಿದ ಪೊಲೀಸರು, ಮೊಬೈಲ್ ಕರೆ ದಾಖಲೆಗಳು ಮತ್ತು ಟವರ್ ಲೊಕೇಶನ್ ಪರಿಶೀಲಿಸಿದಾಗ ಮಹಾಕ್‌ದೀಪ್ ಕೌರ್ ಅವರ ಫೋನ್ ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯ ಬಳಿ ಸಕ್ರಿಯವಾಗಿರುವುದು ಪತ್ತೆಯಾಯಿತು.
ಈ ಸುಳುವಿನ ಬೆನ್ನತ್ತಿ ರಾಜಸ್ಥಾನ ಪೊಲೀಸರು ಗುದಾಸ್‌ಪುರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯಗಳು ಹೊರಬಂದಿವೆ.
ಹೋಟೆಲ್ ಭೇಟಿಯೇ ಮೊದಲ ಸುಳುವು: ರಾಜಸ್ಥಾನದ ಒಂದೇ ಹೋಟೆಲ್‌ಗೆ ಮೂರು ಬಾರಿ ಭೇಟಿ ನೀಡಿ ತಂಗಿದ್ದೇ ತನಿಖಾಧಿಕಾರಿಗಳಿಗೆ ಆರೋಪಿಗಳನ್ನು ಪತ್ತೆಹಚ್ಚಲು ಪ್ರಮುಖ ಸುಳುವಾಯಿತು.
ಪಾಕ್ ಗಡಿಯಲ್ಲಿ ಮೊಬೈಲ್ ಲೊಕೇಶನ್: ತಾಂತ್ರಿಕ ಕಣ್ಗಾವಲು ಮತ್ತು ಮೊಬೈಲ್ ಟವರ್ ಲೊಕೇಶನ್ ಮೂಲಕ ಆರೋಪಿಯ ಸಂಚಾರ ಪತ್ತೆಹಚ್ಚಲಾಗಿದ್ದು, ಗಡಿ ಭಾಗದ ನಂಟು ಬೆಳಕಿಗೆ ಬಂದಿದೆ.
ಮೊಬೈಲ್‌ನಲ್ಲಿ ಸ್ಫೋಟಕ ವಿಡಿಯೋ ಲಭ್ಯ: ಬಂಧಿತರ ಮೊಬೈಲ್ ಪರಿಶೀಲಿಸಿದಾಗ ರೈಲು ಹಳಿ ಮೇಲೆ ಸ್ಫೋಟಕ ಸಾಧನವನ್ನು ಅಳವಡಿಸುತ್ತಿರುವ ದೃಶ್ಯವಿರುವ ವಿಡಿಯೋ ಪತ್ತೆಯಾಗಿದ್ದು, ಇದು ಪ್ರಮುಖ ಸಾಕ್ಷ್ಯವಾಗಿದೆ.
ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ನಂಟು: ಕೃತ್ಯ ಪೂರ್ಣಗೊಂಡ ಬಳಿಕ ಪುರಾವೆಯಾಗಿ ವಿಡಿಯೋ ಕಳುಹಿಸುವಂತೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳು ಸೂಚಿಸಿದ್ದರು ಹಾಗೂ ಹಣದ ಆಮಿಷವೊಡ್ಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಕ್‌ದೀಪ್ ಕೌರ್ ಜತೆಗೆ ಗುದಾಸ್‌ಪುರ ಮೂಲದ ದೇವಿಂದರ್ ಸಿಂಗ್‌ನನ್ನು ಸಹ ವಶಕ್ಕೆ ಪಡೆದಿರುವ ಪೊಲೀಸರು, ಪಾಕಿಸ್ತಾನ ಮೂಲದ ಉಗ್ರರ ಜಾಲ ಹಾಗೂ ಹಣಕಾಸಿನ ವ್ಯವಸ್ಥೆ ಕುರಿತು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.





Leave a comment