ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯು, ಮೂಲ ಮತ್ತು ನೈಸರ್ಗಿಕ ವಿಜ್ಞಾನಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ‘ಉನ್ನತ ಶಿಕ್ಷಣಕ್ಕಾಗಿ ಇನ್ಸ್ಪೈರ್ ಸ್ಕಾಲರ್ಶಿಪ್’ (INSPIRE-SHE) ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು 12,000 ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು 2026ರ ಡಿಸೆಂಬರ್ 7ರ ರಾತ್ರಿ 11:59 ರವರೆಗೆ ಅವಕಾಶ ನೀಡಲಾಗಿದೆ.
ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 17 ರಿಂದ 22 ವರ್ಷ ವಯಸ್ಸಿನವರಾಗಿರಬೇಕು ಮತ್ತು 2025ರಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ ಒಟ್ಟು 80,000 ರೂ.ಗಳ ಆರ್ಥಿಕ ನೆರವು ದೊರೆಯಲಿದೆ. ಇದರಲ್ಲಿ ಪ್ರತಿ ತಿಂಗಳು 5,000 ರೂ.ಗಳಂತೆ ವಾರ್ಷಿಕ 60,000 ರೂ. ಮಾಸಿಕ ಶಿಷ್ಯವೇತನ ಹಾಗೂ ಬೇಸಿಗೆ ಸಂಶೋಧನಾ ಮಾರ್ಗದರ್ಶನಕ್ಕಾಗಿ (Summer Research Mentorship) 20,000 ರೂ. ಅನುದಾನ ಸೇರಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ online-inspire.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳು: 12ನೇ ತರಗತಿ ಮಂಡಳಿ ಪರೀಕ್ಷೆಯಲ್ಲಿ ಅಗ್ರ ಶೇ. 1ರಷ್ಟು ಅಂಕ ಗಳಿಸಿದವರು, ಜೆಇಇ (JEE) ಮುಖ್ಯ ಅಥವಾ ಅಡ್ವಾನ್ಸ್ಡ್ ಹಾಗೂ ನೀಟ್ (NEET) ಪರೀಕ್ಷೆಯಲ್ಲಿ ಅಗ್ರ 10,000 ರ್ಯಾಂಕ್ ಪಡೆದವರು ಹಾಗೂ ಎನ್ಟಿಎಸ್ಇ (NTSE) ಅಥವಾ ಒಲಿಂಪಿಯಾಡ್ ಪದಕ ವಿಜೇತರು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಡಿಸೆಂಬರ್ 7, 2026 ರೊಳಗೆ ಅಧಿಕೃತ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಕೋರ್ಸ್ಗಳ ವಿವರ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಬಯೋಟೆಕ್ನಾಲಜಿ ಮುಂತಾದ ಮೂಲ ವಿಜ್ಞಾನ ಕೋರ್ಸ್ಗಳಲ್ಲಿ ಬಿ.ಎಸ್ಸಿ, ಬಿ.ಎಸ್ ಅಥವಾ ಇಂಟಿಗ್ರೇಟೆಡ್ ಎಂ.ಎಸ್ಸಿ ಅಭ್ಯಾಸ ಮಾಡುತ್ತಿರುವವರು ಈ ಸ್ಕಾಲರ್ಶಿಪ್ಗೆ ಅರ್ಹರು.





Leave a comment