Home ಕ್ರೈಂ ನ್ಯೂಸ್ ಡಿಜೆ ಸೌಂಡ್‌ಗೆ ಕಂದಮ್ಮ ಬಲಿ: ಜೋರಾಗಿ ಸಂಗೀತ ನುಡಿಸಿದ್ದರಿಂದ ಎದೆಬಡಿತ ನಿಂತು 20 ದಿನದ ಹಸುಗೂಸು ಸಾವು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಡಿಜೆ ಸೌಂಡ್‌ಗೆ ಕಂದಮ್ಮ ಬಲಿ: ಜೋರಾಗಿ ಸಂಗೀತ ನುಡಿಸಿದ್ದರಿಂದ ಎದೆಬಡಿತ ನಿಂತು 20 ದಿನದ ಹಸುಗೂಸು ಸಾವು!

Share
ಡಿಜೆ
Share

ಬಲ್ಲಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಮನೆಯ ಹೊರಗೆ ಜೋರಾಗಿ ಡಿಜೆ ಸಂಗೀತ ನುಡಿಸಿದ್ದರಿಂದ ಉಂಟಾದ ತೀವ್ರ ಶಬ್ದದಿಂದ ಎದೆಬಡಿತ ನಿಂತು 20 ದಿನದ ಹಸುಗೂಸೊಂದು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ವರದಿಯಾಗಿದೆ. ಮೃತ ಮಗುವಿನ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಡಿಜೆ ವಾಹನ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬಲ್ಲಿಯಾದ ಮುದಿಯಾರಿ ಗ್ರಾಮದ ಮಣಿಯಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ ರೀಮಾ ದೇವಿ ತಮ್ಮ ಹಸುಗೂಸಿನೊಂದಿಗೆ ಗುಡಿಸಲಿನಲ್ಲಿ ಮಲಗಿದ್ದಾಗ, ಮೂರ್ತಿ ವಿಸರ್ಜನಾ ಮೆರವಣಿಗೆಯ ಡಿಜೆ ಲಾರಿ ಮನೆಯ ಮುಂದೆ ಬಂದು ನಿಂತಿದೆ. ಅತಿ ಜೋರಾದ ಶಬ್ದದಿಂದ ಮಗುವಿನ ಎದೆಬಡಿತ ನಿಂತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಡಿಜೆ ನಿಲ್ಲಿಸದಂತೆ ಪದೇ ಪದೇ ಮನವಿ ಮಾಡಿದರೂ ಆಪರೇಟರ್‌ಗಳು ಕ್ಯಾರೆ ಮಾಡಿಲ್ಲ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.

ಜೋರು ಶಬ್ದವೇ ಸಾವಿಗೆ ಕಾರಣ: ಅತಿ ಗಟ್ಟಿಯಾದ ಡಿಜೆ ಶಬ್ದವನ್ನು ತಡೆಯಲಾರದೆ ನವಜಾತ ಮಗು ಇದ್ದಕ್ಕಿದ್ದಂತೆ ಅತ್ತು, ಬಳಿಕ ಹೃದಯ ಸ್ತಂಭನಗೊಂಡು ಸಾವನ್ನಪ್ಪಿದೆ.

ಕಿವಿಗೆ ಬೀಳದ ಮನವಿ: ಡಿಜೆ ವಾಹನವನ್ನು ಮನೆಯ ಮುಂದೆ ನಿಲ್ಲಿಸಬೇಡಿ ಮತ್ತು ಶಬ್ದ ಕಡಿಮೆ ಮಾಡಿ ಎಂದು ಕುಟುಂಬದವರು ಹಲವು ಬಾರಿ ಕೈಮುಗಿದು ಬೇಡಿಕೊಂಡರೂ ಡಿಜೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ.

ಪೊಲೀಸರ ಕಠಿಣ ಕ್ರಮ: ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಜೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮರಣೋತ್ತರ ಪರೀಕ್ಷೆ: ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಜೈ ಶಂಕರ್ ಮಿಶ್ರಾ ತಿಳಿಸಿದ್ದಾರೆ.

ತಮ್ಮ ತವರು ಮನೆಯಲ್ಲಿ ಆರೈಕೆಯಲ್ಲಿದ್ದ ಬಾಣಂತಿ ಹಾಗೂ ಹಸುಗೂಸಿನ ಮೇಲೆ ಈ ದುರಂತ ಸಂಭವಿಸಿರುವುದು ಇಡೀ ಗ್ರಾಮದಲ್ಲಿ ಶೋಕಸಾಗರ ಮುಳುಗಿಸಿದೆ. ಅತಿಯಾದ ಶಬ್ದ ಮಾಲಿನ್ಯ ಮತ್ತು ಜವಾಬ್ದಾರಿಯಿಲ್ಲದ ಡಿಜೆ ಪ್ರದರ್ಶನಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles