Home ದಾವಣಗೆರೆ ನಟಿ ರಮ್ಯಾ ಶ್ರಮಕ್ಕೆ ಸಿಕ್ಕ ಜಯ: ರಾಜ್ಯದಲ್ಲಿ ಮಧ್ಯವಯಸ್ಕ ಮಹಿಳೆಯರ ಆರೋಗ್ಯಕ್ಕಾಗಿ ‘ಋತು ತಾರೆ’ ವಿಶೇಷ ಯೋಜನೆ ಜಾರಿ!
ದಾವಣಗೆರೆನವದೆಹಲಿಬೆಂಗಳೂರು

ನಟಿ ರಮ್ಯಾ ಶ್ರಮಕ್ಕೆ ಸಿಕ್ಕ ಜಯ: ರಾಜ್ಯದಲ್ಲಿ ಮಧ್ಯವಯಸ್ಕ ಮಹಿಳೆಯರ ಆರೋಗ್ಯಕ್ಕಾಗಿ ‘ಋತು ತಾರೆ’ ವಿಶೇಷ ಯೋಜನೆ ಜಾರಿ!

Share
ರಮ್ಯಾ
Share

ಬೆಂಗಳೂರು: ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮುಟ್ಟಿನ ನಿಲುಗಡೆ ಹಂತದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರು ಕಳೆದ ಹಲವು ಸಮಯದಿಂದ ನಡೆಸುತ್ತಿದ್ದ ನಿರಂತರ ಪ್ರಯತ್ನಕ್ಕೆ ಇದೀಗ ದೊಡ್ಡ ಜಯ ಸಿಕ್ಕಿದೆ.

ಕರ್ನಾಟಕ ಸರ್ಕಾರವು 35 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗಾಗಿ ‘ಋತು ತಾರೆ’ ಕರ್ನಾಟಕ ರಾಜ್ಯ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತರಲು ಅಧಿಕೃತ ಆದೇಶ ಹೊರಡಿಸಿದೆ.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ವಿಶೇಷ ಮುತುವರ್ಜಿ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಮಹತ್ವದ ಯೋಜನೆ ಸಾಕಾರಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತವಾಗಿ ಮೂರು ತಿಂಗಳ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಬುಧವಾರ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಶನಿವಾರ ವಿಶೇಷ ‘ಋತು ತಾರೆ’ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಲಿವೆ.

ಸಮಗ್ರ ಆರೋಗ್ಯ ತಪಾಸಣೆ: 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೃದಯದ ಆರೋಗ್ಯ, ಮಧುಮೇಹ, ಮೂಳೆಗಳ ಬಲ (Bone Health), ಮಾನಸಿಕ ಸ್ವಾಸ್ಥ್ಯ ಹಾಗೂ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಈ ಕ್ಲಿನಿಕ್‌ಗಳಲ್ಲಿ ನಡೆಸಲಾಗುತ್ತದೆ.

ವಿಶೇಷ ಹೆಲ್ತ್ ಕಾರ್ಡ್ ಹಾಗೂ ತರಬೇತಿ: ಮಹಿಳೆಯರಿಗಾಗಿ ಪ್ರತ್ಯೇಕ ‘ಮಿಡ್-ಲೈಫ್ ವಿಮೆನ್ಸ್ ಹೆಲ್ತ್ ಕಾರ್ಡ್’ ವಿತರಿಸಲಾಗುವುದು. ಜೊತೆಗೆ ಆಶಾ ಕಾರ್ಯಕರ್ತರು, ಸಿಎಚ್‌ಒಗಳು, ವೈದ್ಯರು ಹಾಗೂ ನರ್ಸ್‌ಗಳಿಗೆ ಈ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ.

ಕನ್ನಡದಲ್ಲಿ ಜಾಗೃತಿ ಅಭಿಯಾನ: ಮಹಿಳೆಯರಲ್ಲಿ ಅರಿವು ಮೂಡಿಸಲು ಕನ್ನಡ ಭಾಷೆಯಲ್ಲಿ ಸಮಗ್ರ ಮಾಹಿತಿ ಹಾಗೂ ಜಾಗೃತಿ ಸಾಮಾಗ್ರಿಗಳನ್ನು ಸಿದ್ಧಪಡಿಸಿ ವಿತರಿಸಲಾಗುವುದು.

“ಇಷ್ಟು ವರ್ಷಗಳ ಕಾಲ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ‘ಸುಮ್ಮನೆ ಹೊಂದಿಕೊಳ್ಳಿ’ (Just Adjust) ಎಂದು ಹೇಳಲಾಗುತ್ತಿತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಮೆನೋಪಾಸ್ ಈಗ ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಭಾಗವಾಗಿದೆ. ರಾಜ್ಯ ತಾಂತ್ರಿಕ ಸಮಿತಿ, ಆರೋಗ್ಯ ಇಲಾಖೆ, ವೈದ್ಯರು ಹಾಗೂ ತಮ್ಮ ಅನುಭವ ಹಂಚಿಕೊಂಡ ಪ್ರತಿಯೊಬ್ಬ ಮಹಿಳೆಗೂ ಧನ್ಯವಾದಗಳು. ಇದು ಕೇವಲ ಆರಂಭವಷ್ಟೇ, ದೇಶದ ಇತರ ರಾಜ್ಯಗಳೂ ಇದನ್ನು ಅನುಸರಿಸುತ್ತವೆ ಎಂಬ ಭರವಸೆಯಿದೆ,” ಎಂದು ನಟಿ ರಮ್ಯಾ ಸಂತಸ ಹಂಚಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *