ನವದೆಹಲಿ: 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಜಯಗಳಿಸಿದ ಬಳಿಕ ದೇಶದ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದ ಪ್ರಧಾನಿ ಹುದ್ದೆ ತಿರಸ್ಕಾರದ ಹಿಂದಿನ ಅತಿ ದೊಡ್ಡ ರಹಸ್ಯವನ್ನು ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಹೊಸ ಆತ್ಮಕತೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಚುನಾವಣೆಗೆ ತಿಂಗಳುಗಳ ಮುನ್ನವೇ ತಾನು ಯಾವುದೇ ಕಾರಣಕ್ಕೂ ಪ್ರಧಾನಿಯಾಗುವುದಿಲ್ಲ ಎಂದು ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಗೆ ಸ್ಪಷ್ಟಪಡಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.
ಆದರೆ ಚುನಾವಣಾ ಗೆಲುವಿನ ಬಳಿಕ ಮಿತ್ರಪಕ್ಷಗಳ ನಾಯಕರ ತೀವ್ರ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ತಾತ್ಕಾಲಿಕವಾಗಿ “Theek hai” (ಸರಿ) ಎಂದಿದ್ದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ. ಈ ನಿರ್ಧಾರ ತಿಳಿದ ತಕ್ಷಣ ಮಗ ರಾಹುಲ್ ಗಾಂಧಿ ಹಾಗೂ ಮಗಳು ಪ್ರಿಯಾಂಕಾ ಗಾಂಧಿ ತೀವ್ರವಾಗಿ ವಿರೋಧಿಸಿ, ಕುಟುಂಬದ ಸುರಕ್ಷತೆ ಮತ್ತು ತಮ್ಮ ಹಿಂದಿನ ತೀರ್ಮಾನಕ್ಕೆ ಬದ್ಧವಾಗಿರುವಂತೆ ಒತ್ತಡ ಹೇರಿದ್ದರಿಂದ ಅಂತಿಮವಾಗಿ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿದು ಮನಮೋಹನ್ ಸಿಂಗ್ ಅವರನ್ನು ಆ ಹುದ್ದೆಗೆ ಸೂಚಿಸಲು ನಿರ್ಧರಿಸಿದ್ದಾಗಿ ಪುಸ್ತಕದಲ್ಲಿ ರೋಚಕವಾಗಿ ವಿವರಿಸಿದ್ದಾರೆ.
ಮಕ್ಕಳ ತೀವ್ರ ವಿರೋಧ: ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ಕರಾಳ ದಿನಗಳನ್ನು ನೆನಪಿಸಿಕೊಂಡು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ತಾಯಿ ಸೋನಿಯಾ ಗಾಂಧಿ ಪ್ರಧಾನಿಯಾಗುವುದನ್ನು ತೀವ್ರವಾಗಿ ವಿರೋಧಿಸಿದ್ದರು.
ಒತ್ತಡಕ್ಕೆ ಮಣಿದು ‘ಸರಿ’ ಎಂದ ಕ್ಷಣ: ಮೈತ್ರಿಕೂಟದ ನಾಯಕರ ಸಭೆಯಲ್ಲಿ ಯಾರೂ ಮಾತಿಗೆ ಬೆಲೆ ಕೊಡದೆ ಒತ್ತಡ ಹೇರಿದಾಗ, ಗೊಂದಲದ ನಡುವೆ ತಾವು ಅನಿವಾರ್ಯವಾಗಿ ‘ಥೀಕ್ ಹೈ’ (ಸರಿ) ಎಂದಿದ್ದಾಗಿ ಸೋನಿಯಾ ತಿಳಿಸಿದ್ದಾರೆ.
ಮಕ್ಕಳ ಆಕ್ರೋಶ ಹಾಗೂ ಮನವರಿಕೆ: ತಾಯಿ ಒಪ್ಪಿಕೊಂಡಿದ್ದನ್ನು ತಿಳಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, “ನಮ್ಮ ಬಗ್ಗೆಯೂ ಯೋಚಿಸಿ, ಒತ್ತಡಕ್ಕೆ ಮಣಿಯಬೇಡಿ” ಎಂದು ದಿಢೀರ್ ಎಚ್ಚರಿಕೆ ನೀಡಿ ತಮ್ಮ ನಿರ್ಧಾರ ಬದಲಿಸುವಂತೆ ಕೋರಿದ್ದರು.
ಅಂತರರಾತ್ಮೆಯ ನಿರ್ಧಾರ: ರಾತ್ರಿಯಿಡೀ ಯೋಚಿಸಿ, ತನ್ನ ಒಳದನಿಯ ಮಾತಿನಂತೆ ನಡೆದುಕೊಳ್ಳಲು ನಿರ್ಧರಿಸಿದ ಸೋನಿಯಾ ಗಾಂಧಿ, ಅಂತಿಮವಾಗಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಪ್ರಸ್ತಾವಿಸಿದರು.
ಕುಟುಂಬದ ಸುರಕ್ಷತೆ, ರಾಜಕೀಯ ಜವಾಬ್ದಾರಿ ಹಾಗೂ ಅಂತರರಾತ್ಮೆಯ ಕರೆಯನ್ನು ತುಲನೆ ಮಾಡಿ ತೆಗೆದುಕೊಂಡ ಈ ಐತಿಹಾಸಿಕ ನಿರ್ಧಾರದ ಹಿಂದಿನ ಆಂತರಿಕ ಸಂಘರ್ಷವನ್ನು ಈ ಕೃತಿ ಅತ್ಯಂತ ಆಳವಾಗಿ ದಾಖಲಿಸಿದೆ.





Leave a comment