ಹೈದರಾಬಾದ್: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಬ್ರಹ್ಮಾಂಡ ಕಥೆಯಾದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana: Rise of a Legend) ಚಿತ್ರದ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ತಮ್ಮ ವಿಶಿಷ್ಟ ಶೈಲಿಯಲ್ಲಿ ವಿಮರ್ಶೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರವನ್ನು ಕೇವಲ ಸಾಂಪ್ರದಾಯಿಕ ಭಕ್ತಿ ಪ್ರಧಾನ ಚಿತ್ರ ಎನ್ನದೆ, ಅದೊಂದು ರಾಜಿ ಮಾಡಿಕೊಳ್ಳದ “ಭಕ್ತಿ ಶಕ್ತಿ” (Devotional Force) ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುವವರನ್ನು ‘ಬೀದಿ ನಾಯಿಗಳ ಬೊಗಳುವಿಕೆ’ಗೆ ಹೋಲಿಸಿ ವಿಮರ್ಶಕರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಚಿತ್ರದ ದೃಶ್ಯ ವೈಭವ, ಪಾತ್ರವರ್ಗದ ಅಭಿನಯ ಹಾಗೂ ನಿರ್ದೇಶನದ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಆರ್.ಜಿ.ವಿ., ಇದು ಸಾಮಾನ್ಯ ಪೌರಾಣಿಕ ಚಿತ್ರಕ್ಕಿಂತ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವತಾ ಶಕ್ತಿಯಂತೆ ರಾಮಾಯಣ: ರಾಮಾಯಣವು ಕೇವಲ ಭಕ್ತಿ ಚಿತ್ರವಲ್ಲ, ಅದೊಂದು ಭಕ್ತಿ ಶಕ್ತಿಯಾಗಿದೆ. ನಾಯಕನು ನೀಲಿ ಬಣ್ಣದ ದೇವತೆಯಂತೆ ತೇಲುವುದಿಲ್ಲ, ಬದಲಿಗೆ ಪ್ರಪಂಚದ ಅಂತ್ಯವನ್ನು ನೋಡಿದರೂ ಧೈರ್ಯವಾಗಿ ಹೆಜ್ಜೆಹಾಕುವ ಮನುಷ್ಯನಾಗಿದ್ದಾನೆ ಎಂದು ವರ್ಮಾ ಬಣ್ಣಿಸಿದ್ದಾರೆ.
ನಕಾರಾತ್ಮಕ ವಿಮರ್ಶಕರಿಗೆ ತೀಕ್ಷ್ಣ ತರಾಟೆ: ಚಿತ್ರದ ನಿರ್ಮಾಪಕರು ಹಾಗೂ ತಂಡದವರ ಬೃಹತ್ ಶ್ರಮವನ್ನು ಕೊಂಡಾಡಿರುವ ಅವರು, ನೆಗೆಟಿವ್ ವಿಮರ್ಶೆ ಮಾಡುವವರನ್ನು ಆನೆಯ ದಾರಿಯಲ್ಲಿ ಬೊಗಳುವ ಬೀದಿ ನಾಯಿಗಳಿಗೆ ಹೋಲಿಸಿ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದಿದ್ದಾರೆ.
ತಾರಾಗಣದ ಪ್ರಶಂಸೆ: ಚಿತ್ರದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ದಿಗ್ಗಜ ನಟರ ಅಭಿನಯ ಹಾಗೂ ಜಟಾಯು ಪಾತ್ರದಲ್ಲಿ ಅನುಪಮ್ ಖೇರ್ ಅವರ ನಟನೆಯನ್ನು ಅವರು ಮನದುಂಬಿ ಕೊಂಡಾಡಿದ್ದಾರೆ.
ನವೆಂಬರ್ 5ರಂದು ಬಿಡುಗಡೆಯಾಗಿರುವ ಈ ಚಿತ್ರದ ಮೇಕಿಂಗ್ ಹಾಗೂ ಪಾತ್ರಗಳ ಗಂಭೀರತೆಯನ್ನು ವರ್ಮಾ ತಮ್ಮ ಎಕ್ಸ್ (X) ಖಾತೆಯಲ್ಲಿ ಸವಿವರವಾಗಿ ಪ್ರಶಂಸಿಸಿದ್ದು, ಸಿನಿಮಾ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.





Leave a comment