ವಿಶಾಖಪಟ್ಟಣಂ: ಉದ್ಯೋಗದ ಹುಡುಕಾಟದಲ್ಲಿ ರಷ್ಯಾಗೆ ತೆರಳಿದ್ದ ಆಂಧ್ರಪ್ರದೇಶದ ಯುವಕನೊಬ್ಬನನ್ನು ವಂಚಕ ಏಜೆಂಟರು ಮೋಸದಿಂದ ರಷ್ಯಾ ಸೇನೆಗೆ ಸೇರ್ಪಡೆಗೊಳಿಸಿ, ಉಕ್ರೇನ್ ಗಡಿ ಪ್ರದೇಶದ ಮುಂಚೂಣಿ ಯುದ್ಧಭೂಮಿಗೆ ಕಳುಹಿಸಿರುವ ಕರುಳುಹಿಂಡುವ ಘಟನೆ ಬೆಳಕಿಗೆ ಬಂದಿದೆ. ಸಂಕಷ್ಟದಲ್ಲಿರುವ ಯುವಕನ ತಾಯಿ ತನ್ನ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಕೇಂದ್ರ ಹಾಗೂ ಆಂಧ್ರಪ್ರದೇಶ ಸರ್ಕಾರಗಳಿಗೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
Heartbreaking to see the plight of our citizens stranded abroad. @OfficeofNL, request your urgent intervention with the concerned authorities to assist them and ensure their safe and speedy return back home. pic.twitter.com/BX2oAiSaCg
— Lokesh Nara (@naralokesh) November 2, 2026
ಆಂಧ್ರಪ್ರದೇಶದ ಜೆ. ವಂಶಿ ಎಂಬ ಯುವಕ ಹಣ್ಣು ಪ್ಯಾಕಿಂಗ್ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದನು. ಆದರೆ ಅಲ್ಲಿ ಸೂಕ್ತ ಕೆಲಸ ಸಿಗದಿದ್ದಾಗ, ನೇಪಾಳಿ ಮೂಲದ ಏಜೆಂಟನೊಬ್ಬ ಮಿಲಿಟರಿಯಲ್ಲಿ ಆಹಾರ ಪ್ಯಾಕಿಂಗ್ ಕೆಲಸ ನೀಡುವುದಾಗಿ ನಂಬಿಸಿ ರಷ್ಯಾ ಸೇನೆಗೆ ಸೇರ್ಪಡೆಗೊಳಿಸಿದ್ದಾನೆ. ರಷ್ಯನ್ ಭಾಷೆಯಲ್ಲಿದ್ದ ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡು, ಅವರಿಗೆ ತಿಳಿಯದಂತೆ ರಷ್ಯನ್ ಪೌರತ್ವ ನೀಡಿ ಉಕ್ರೇನ್ ಯುದ್ಧದ ಮುಂಚೂಣಿ ಸಾಲಿಗೆ ಕಳುಹಿಸಲಾಗಿದೆ.
ವಂಶಿ ಸೇರಿದಂತೆ ಐವರು ಭಾರತೀಯ ಯುವಕರು ವಿಡಿಯೋ ಸಂದೇಶ ರವಾನಿಸಿದ್ದು, “ಇವು ನಮ್ಮ ಕೊನೆಯ ಮಾತುಗಳಾಗಬಹುದು, ನಮ್ಮ ಜೀವ ಅಪಾಯದಲ್ಲಿದೆ. ದಯವಿಟ್ಟು ನಮ್ಮನ್ನು ರಕ್ಷಿಸಿ” ಎಂದು ಗೋಗರೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು ತಕ್ಷಣ ಸ್ಪಂದಿಸಿದ್ದು, ರಾಯಭಾರ ಕಚೇರಿಯೊಂದಿಗೆ ಸಂವಹನ ನಡೆಸಿ ಯುವಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಉದ್ಯೋಗದ ಹೆಸರಲ್ಲಿ ವಂಚನೆ: ಹಣ್ಣು ಹಾಗೂ ಆಹಾರ ಪ್ಯಾಕಿಂಗ್ ಕೆಲಸದ ನೆಪದಲ್ಲಿ ಆಂಧ್ರದ ವಂಶಿ ಸೇರಿದಂತೆ ಐವರು ಭಾರತೀಯರನ್ನು ಮೋಸದಿಂದ ರಷ್ಯಾ ಸೇನೆಗೆ ಸೇರಿಸಲಾಗಿದೆ.
ಯುದ್ಧಭೂಮಿಗೆ ನಿಯೋಜನೆ: ಯುವಕರಿಗೆ ತಿಳಿಯದಂತೆ ರಷ್ಯನ್ ಪೌರತ್ವ ನೀಡಿ, ರಷ್ಯಾ-ಉಕ್ರೇನ್ ಯುದ್ಧದ ಭೀಕರ ಮುಂಚೂಣಿ ಸಾಲಿಗೆ ಕಳುಹಿಸಲಾಗಿದೆ.
ತಾಯಿಯ ಕಣ್ಣೀರಿನ ಆಕ್ರಂದನ: “ನನಗೆ ಗಂಡನೂ ಇಲ್ಲ, ಮಗನೇ ಆಸರೆ. ಆತನನ್ನು ಸುರಕ್ಷಿತವಾಗಿ ಕರೆತನ್ನಿ” ಎಂದು ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅವರಿಗೆ ವಂಶಿ ತಾಯಿ ಮನವಿ ಮಾಡಿದ್ದಾರೆ.
ಸರ್ಕಾರದ ತಕ್ಷಣದ ಸ್ಪಂದನೆ: ವಿಡಿಯೋ ಗಮನಿಸಿದ ಸಚಿವ ನಾರಾ ಲೋಕೇಶ್, ಸಂಬಂಧಪಟ್ಟ ಅಧಿಕಾರಿಗಳಿಗೆ ಯುವಕರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.





Leave a comment