ಬೆಂಗಳೂರು/ಹೊಸದೆಹಲಿ:ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ‘ಸಿದ್ದು ಸ್ಟಿಂಗ್’ ವಿಡಿಯೋ ವಿವಾದದ ಬೆನ್ನಲ್ಲೇ, ದೆಹಲಿಯಲ್ಲಿ ಇಂಡಿ ಒಕ್ಕೂಟದ ಸಮಾವೇಶದ ವೇಳೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಭೇಟಿ ತೀವ್ರ ಕುತೂಹಲ ಹಾಗೂ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, “2028ರ ಚುನಾವಣೆಗೆ ನಾನು ಪಾರ್ಟಿಗೆ ಬೇಕಾ ಅಥವಾ ಬೇಡ್ವಾ?” ಎಂದು ರಾಹುಲ್ ಗಾಂಧಿ ಅವರ ಬಳಿ ನೇರವಾಗಿಯೇ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿ ತಿಂಗಳಾಗುತ್ತಿದ್ದರೂ ಪ್ರಮುಖ ಆರೋಪಿಗಳಾದ ಕೃಪಾ ಆಳ್ವಾ, ಮುಸುಕುಧಾರಿ ಮಹಿಳೆ ಹಾಗೂ ಇದರ ಹಿಂದೆ ಇದ್ದವರು ಯಾರೂ ಇನ್ನೂ ಬಂಧನಕ್ಕೊಳಗಾಗದಿರುವುದು ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.
“ನೀವು ಹೇಳಿದಂತೆ ರಾಜೀನಾಮೆ ನೀಡಿದೆ, ಆದರೆ ರಾಜೀನಾಮೆ ನೀಡಿದ ಮೇಲೂ ನನ್ನನ್ನು ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ, ಸ್ಟಿಂಗ್ ಮಾಡಿಸಿದವರು ಯಾರು ಎಂಬುದು ನನಗೆ ಬೇಕಿದೆ” ಎಂದು ಅವರು ಗರಂ ಆಗಿದ್ದಾರೆ. ವಿಧಾನ ಪರಿಷತ್ ಚುನಾವಣೆ ಫಲಿತಾಂಶಗಳ ಮೇಲೆ ಈ ವಿಡಿಯೋದ ದುಷ್ಪರಿಣಾಮ ಬೀರಿದೆ ಎಂಬುದನ್ನು ಸ್ಪಷ್ಟಪಡಿಸಿರುವ ಸಿದ್ದು, ಪಕ್ಷದ ಹೈಕಮಾಂಡ್‌ನ ಮೌನ ಹಾಗೂ ತನಿಖೆಯ ಅಸ್ಪಷ್ಟತೆಯ ಬಗ್ಗೆ ತಮ್ಮ ಅಸಮಾಧಾನವನ್ನು ಮುಕ್ತವಾಗಿ ಹೊರಹಾಕಿದ್ದಾರೆ.
ರಾಹುಲ್ ಗಾಂಧಿ ಎದುರು ಆಕ್ರೋಶ: ದೆಹಲಿ ಭೇಟಿಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮುಂದೆ ತಮ್ಮ ಅಸಮಾಧಾನವನ್ನು ಅತ್ಯಂತ ಗಂಭೀರವಾಗಿ ವ್ಯಕ್ತಪಡಿಸಿದ್ದಾರೆ.
2028ರ ಚುನಾವಣೆ ಪ್ರಶ್ನೆ: ಪಕ್ಷಕ್ಕೆ ಮತ್ತು ಚುನಾವಣಾ ಪ್ರಚಾರಕ್ಕೆ ತಾನು ಇನ್ನುಮುಂದೆ ಬೇಕಾ ಅಥವಾ ಬೇಡ್ವಾ ಎಂದು ನೇರವಾಗಿ ಹೈಕಮಾಂಡ್‌ಗೆ ಸಿದ್ದು ಪ್ರಶ್ನಿಸಿದ್ದಾರೆ.
ನಿಧಾನಗತಿಯ ತನಿಖೆಗೆ ಆಕ್ಷೇಪ: ಸ್ಟಿಂಗ್ ವಿಡಿಯೋ ಪ್ರಕರಣದ ತನಿಖೆ ಎಲ್ಲಿದ್ದಲ್ಲಿಯೇ ನಿಂತಿರುವುದಕ್ಕೆ ಹಾಗೂ ಆರೋಪಿಗಳ ಬಂಧನವಾಗದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತವಾಗಿದೆ.
ಚುನಾವಣಾ ಫಲಿತಾಂಶದ ಹಿನ್ನಡೆ: ಈ ವಿವಾದದ ಪರಿಣಾಮವು ಇತ್ತೀಚಿನ ಎಂಎಲ್‌ಸಿ ಚುನಾವಣೆಗಳಲ್ಲೂ ಪಕ್ಷದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.





Leave a comment