Home ಕ್ರೈಂ ನ್ಯೂಸ್ ದಸರಾ ಆಚರಣೆಯಲ್ಲಿ AK-47 ಗನ್ ಫೈರಿಂಗ್: ಹಿರಿಯ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾಗೆ ‘ಶೋಕಾಸ್’ ನೋಟಿಸ್
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದಸರಾ ಆಚರಣೆಯಲ್ಲಿ AK-47 ಗನ್ ಫೈರಿಂಗ್: ಹಿರಿಯ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾಗೆ ‘ಶೋಕಾಸ್’ ನೋಟಿಸ್

Share
ಅಂಕಿತಾ ಶರ್ಮಾ
Share

ರಾಯ್‌ಪುರ: ದಸರಾ ಹಬ್ಬದ ಶಸ್ತ್ರಪೂಜೆ ಸಂದರ್ಭದಲ್ಲಿ ಎ ಕೆ-47 (AK-47) ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ವಿವಾದಕ್ಕೆ ಈಡಾಗಿದ್ದ ಛತ್ತೀಸ್‌ಗಢದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ರಾಜನಂದಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾಗೆ ಪೊಲೀಸ್ ಪ್ರಧಾನ ಕಚೇರಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶಸ್ತ್ರಾಸ್ತ್ರ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಭದ್ರತಾ ನಿಯಮಾವಳಿಗಳನ್ನು ನಿರ್ಲಕ್ಷಿಸಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಅಕ್ಟೋಬರ್ 20 ರಂದು ಪೊಲೀಸ್ ಲೈನ್ಸ್‌ನಲ್ಲಿ ನಡೆದ ಸಾಂಪ್ರದಾಯಿಕ ಶಸ್ತ್ರಪೂಜೆಯ ನಂತರ ಅಂಕಿತಾ ಶರ್ಮಾ ಅವರು ಎ ಕೆ-47 ನಿಂದ ಹಲವು ಸುತ್ತು ಗುಂಡು ಹಾರಿಸಿದ್ದರು. ಈ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿತ್ತು. ಆದರೆ, ಘಟನೆಯಿಂದ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆಯಾಗಿದೆ ಎಂದು ಪೊಲೀಸ್ ಪ್ರಧಾನ ಕಚೇರಿ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಸುರಕ್ಷತಾ ನಿಯಮಾವಳಿ ಉಲ್ಲಂಘನೆ: ಸಾಂಪ್ರದಾಯಿಕ ಶಸ್ತ್ರಪೂಜೆಯ ವೇಳೆ ಲೋಡೆಡ್ ಆಯುಧವನ್ನು ಜನರಿರುವ ದಿಕ್ಕಿನಲ್ಲಿ ಹಿಡಿದು ಗಾಳಿಯಲ್ಲಿ ಫೈರಿಂಗ್ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ವಿಶ್ರಾಂತ ಐಪಿಎಸ್ ಅಧಿಕಾರಿಗಳು ಹಾಗೂ ನಿವೃತ್ತ ಸೇನಾಧಿಕಾರಿಗಳು ಈ ನಡೆಯನ್ನು ಖಂಡಿಸಿದ್ದು, ಶಸ್ತ್ರಪೂಜೆ ಎಂದರೆ ಆಯುಧಗಳಿಗೆ ಪೂಜೆ ಸಲ್ಲಿಸುವುದೇ ಹೊರತು ಗುಂಡು ಹಾರಿಸುವುದಲ್ಲ ಎಂದು ಆಕ್ಷೇಪಿಸಿದ್ದಾರೆ.

ಇತರೆ ಜಿಲ್ಲೆಗಳಲ್ಲೂ ಫೈರಿಂಗ್ ಹಾವಳಿ: ಅಂಕಿತಾ ಶರ್ಮಾ ಮಾತ್ರವಲ್ಲದೆ ಹೆಚ್ಚುವರಿ ಎಸ್‌ಪಿ ಕೀರ್ತನ್ ರಾಥೋಡ್ ಹಾಗೂ ರಾಯ್‌ಪುರ, ಬಿಲಾಸಪುರ, ದುರ್ಗ್ ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿರುವ ವಿಡಿಯೋಗಳು ವೈರಲ್ ಆಗಿವೆ.

ಈ ಕುರಿತು ರಾಜನಂದಗಾಂವ್ ವಲಯ ಐಜಿಪಿ ಅಜಯ್ ಯಾದವ್ ಪ್ರತಿಕ್ರಿಯಿಸಿ, ಎಸ್‌ಪಿ ಅಂಕಿತಾ ಶರ್ಮಾ ಅವರಿಂದ ಲಿಖಿತ ಉತ್ತರ ಬಂದ ನಂತರ ತಮ್ಮ ಅಭಿಪ್ರಾಯದೊಂದಿಗೆ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಸಲ್ಲಿಸಲಾಗುವುದು ಮತ್ತು ಅಲ್ಲಿಂದ ಬರುವ ನಿರ್ದೇಶನದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles