ಹೈದರಾಬಾದ್: ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಒಂದಲ್ಲ ಒಂದು ಭಾವನಾತ್ಮಕ ಹಾಗೂ ಸ್ಪೂರ್ತಿದಾಯಕ ವೀಡಿಯೊಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಜಿಮ್‌ನಲ್ಲಿ ಕೆಲಸ ಮಾಡುವ ಶುಚಿಗೊಳಿಸುವ ಕಾರ್ಮಿಕನೊಬ್ಬನಿಗೆ ತನ್ನ ಕೋಟ್ಯಂತರ ರೂ. ಬೆಲೆಬಾಳುವ ಲಂಬೋರ್ಘಿನಿ (Lamborghini) ಸೂಪರ್‌ಕಾರ್ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಹೈದರಾಬಾದ್ ಮೂಲದ ಉದ್ಯಮಿ ಕುರಾಪತಿ ನಾಗ ವೆಂಕಟ ರಾಕೇಶ್ ಕುಮಾರ್ ಅವರು ಪ್ರತಿದಿನ ಜಿಮ್‌ಗೆ ಬಂದಾಗಲೆಲ್ಲಾ, ಅಲ್ಲಿ ನೆಲ ಗುಡಿಸುವ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ತನ್ನ ಐಷಾರಾಮಿ ಲಂಬೋರ್ಘಿನಿ ಕಾರನ್ನು ಅಷ್ಟೇ ಅಚ್ಚರಿಯಿಂದ ಮತ್ತು ಕುತೂಹಲದಿಂದ ನೋಡುವುದನ್ನು ಗಮನಿಸುತ್ತಿದ್ದರು. ಒಂದೇ ಸ್ಥಳ, ಅದೇ ಫ್ಲೋರ್ ಕ್ಲೀನಿಂಗ್ ಮಷಿನ್ ಮತ್ತು ಕಾರ್ಮಿಕನ ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಆ ಕನಸಿನ ನೋಟ ರಾಕೇಶ್ ಅವರ ಮನಸ್ಸನ್ನು ಆಳವಾಗಿ ತಾಕಿತು.
ಒಂದು ದಿನ ಸುಂದರ ಮುಂಜಾನೆ ಕೇವಲ ಕಾರನ್ನು ನೋಡಿ ಸುಮ್ಮನಾಗದೆ, ಆ ಕಾರ್ಮಿಕನ ಬಳಿ ತೆರಳಿದ ಉದ್ಯಮಿ ರಾಕೇಶ್ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಕಾರ್ಮಿಕ ಬಳಸುತ್ತಿದ್ದ ಫ್ಲೋರ್ ಕ್ಲೀನಿಂಗ್ ಮಷಿನ್ ಹೇಗೆ ಕೆಲಸ ಮಾಡುತ್ತದೆ ಎಂದು ಕುತೂಹಲದಿಂದ ಕೇಳಿ ತಿಳಿದುಕೊಂಡಿದ್ದಾರೆ. ಬಳಿಕ ಯಾವುದೇ ಮುಜುಗರಕ್ಕೆ ಅವಕಾಶ ನೀಡದೆ, ತಮ್ಮ ಲಂಬೋರ್ಘಿನಿ ಕಾರಿನ ಕೀಯನ್ನು ಆ ಕಾರ್ಮಿಕನ ಕೈಗೆ ನೀಡಿ ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿದ್ದಾರೆ. ಕಾರ್ಮಿಕನ ಮುಖದಲ್ಲಿ ಮೂಡಿದ ಅಚ್ಚರಿ ಹಾಗೂ ಅಪ್ಪಟ ಖುಷಿಯನ್ನು ನೋಡಿ ತಮಗೂ ಅಷ್ಟೇ ಸಂತೋಷವಾಯಿತು ಎಂದು ರಾಕೇಶ್ ತಿಳಿಸಿದ್ದಾರೆ.
ಸ್ಮರಣೆಗೆ ಬಂದ ಕಷ್ಟದ ದಿನಗಳು:
ಈ ಭಾವುಕ ಕ್ಷಣದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿರುವ ರಾಕೇಶ್ ಕುಮಾರ್, ತಮ್ಮ ಬದುಕಿನ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಉದ್ಯಮಿಯಾಗಿ ಯಶಸ್ಸು ಸಾಧಿಸುವ ಮೊದಲು ತಾವೂ ಸಹ ಕೇವಲ 800 ರೂ. ಸಂಬಳಕ್ಕೆ ಸೇಲ್ಸ್‌ಮನ್ ಆಗಿ ಕೆಲಸ ಮಾಡಿದ್ದೆ. ಆ ದಿನಗಳಲ್ಲಿ ಸೂಪರ್‌ಕಾರ್‌ಗಳನ್ನು ನೋಡಿದಾಗ ತಮಗೂ ಹೀಗೆಯೇ ಓಡಿಸಬೇಕು ಎಂಬ ಕನಸಿತ್ತು. ಆದರೆ ಆಗಿನ ಕಾಲದಲ್ಲಿ ದೊಡ್ಡ ಕಾರುಗಳ ಒಡೆಯರು ನಮ್ಮನ್ನು ತಿರುಗಿ ಸಹ ನೋಡುತ್ತಿರಲಿಲ್ಲ. ಅಂದೇ ನಾನು ಒಂದು ಶಪಥ ಮಾಡಿದ್ದೆ, “ಒಂದು ವೇಳೆ ನಾನು ಆ ಮಟ್ಟಕ್ಕೆ ಬೆಳೆದರೆ, ಅವರಂತೆ ದುರಹಂಕಾರದಿಂದ ಇರುವುದಿಲ್ಲ” ಎಂದುಕೊಂಡಿದ್ದೆ ಎಂದು ರಾಕೇಶ್ ಬರೆದುಕೊಂಡಿದ್ದಾರೆ.
ನೆಟ್ಟಿಗರಿಂದ ಭರ್ಜರಿ ಮೆಚ್ಚುಗೆ: “ಗೌರವಿಸಲು ಹಣ ಬೇಕಾಗಿಲ್ಲ, ಒಂದು ಹ್ಯಾಂಡ್‌ಶೇಕ್ ಮಾಡಲು ಯಾವುದೇ ಖರ್ಚಿಲ್ಲ. ಕೆಲವೊಮ್ಮೆ ನಾವು ಯಾರೋ ಒಬ್ಬರಿಗೆ ನೀಡಬಹುದಾದ ಅತ್ಯ ದೊಡ್ಡ ಕೊಡುಗೆ ಹಣವಲ್ಲ, ಬದಲಿಗೆ ಅವರ ಕನಸುಗಳು ನನಸಾಗಬಹುದು ಎಂಬ ನಂಬಿಕೆ” ಎಂದು ಬರೆದು ತಮ್ಮ ಪೋಸ್ಟ್ ಮುಗಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊಗೆ ಕೋಟ್ಯಂತರ ವೀಕ್ಷಣೆಗಳು ಬಂದಿದ್ದು, “ವಿನಮ್ರತೆಯೇ ನಿಜವಾದ ಶ್ರೀಮಂತಿಕೆ”, “ಸರಳತೆಯೇ ಅತಿ ದೊಡ್ಡ ಗುಣ” ಎಂದು ನೆಟ್ಟಿಗರು ಉದ್ಯಮಿ ರಾಕೇಶ್ ಕುಮಾರ್ ಅವರ ದೊಡ್ಡ ಮನಸ್ಸನ್ನು ಕೊಂಡಾಡುತ್ತಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://www.instagram.com/reel/DeeRaoZRry_/?utm_source=ig_embed&ig_rid=AV0lT2491y9aiP-SMoO4RU4





Leave a comment