Home ದಾವಣಗೆರೆ ಭಿನ್ನಾಭಿಪ್ರಾಯ ಮರೆತು ಒಂದಾದರಾ ನಾಯಕರು? ಯತ್ನಾಳ್ – ವಿಜಯೇಂದ್ರ ಸೌಜನ್ಯದ ಭೇಟಿ ಹಿಂದೆ ಇದೆಯಾ ರಣತಂತ್ರ?
ದಾವಣಗೆರೆನವದೆಹಲಿಬೆಂಗಳೂರು

ಭಿನ್ನಾಭಿಪ್ರಾಯ ಮರೆತು ಒಂದಾದರಾ ನಾಯಕರು? ಯತ್ನಾಳ್ – ವಿಜಯೇಂದ್ರ ಸೌಜನ್ಯದ ಭೇಟಿ ಹಿಂದೆ ಇದೆಯಾ ರಣತಂತ್ರ?

Share
ವಿಜಯೇಂದ್ರ
Share

ಹುಬ್ಬಳ್ಳಿ: ರಾಜಕೀಯ ಭಿನ್ನಾಭಿಪ್ರಾಯ ಹಾಗೂ ಬಹಿರಂಗ ವಾಕ್ಸಮರದ ತೀವ್ರತೆಯ ನಡುವೆಯೇ, ಬಿಜೆಪಿಯಿಂದ ಉಚ್ಛಾಟಿತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾನುವಾರ ಮಧ್ಯಾಹ್ನ ಹುಬ್ಬಳ್ಳಿ ಸಮೀಪದ ವರೂರಿನಲ್ಲಿ ಮುಖಾಮುಖಿಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿನ ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ ಅವರ ನಿವಾಸಕ್ಕೆ ಮೊದಲು ಆಗಮಿಸಿದ್ದ ಬಸನಗೌಡ ಪಾಟೀಲ ಯತ್ನಾಳ ಅವರನ್ನು, ಬಳಿಕ ಅಲ್ಲಿಗೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರು ಹಸನ್ಮುಖರಾಗಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು. ಈ ಸರಳ ಮುಖಾಮುಖಿ ಮಾತುಕತೆಯು ರಾಜ್ಯ ಬಿಜೆಪಿಯಲ್ಲಿ ವಿಶೇಷ ಗಮನ ಸೆಳೆದಿದ್ದು, ಕೇವಲ ಸೌಜನ್ಯದ ಭೇಟಿಯೇ ಅಥವಾ ರಾಜಕೀಯ ಸಂಬಂಧ ಸುಧಾರಣೆಯ ಮುನ್ಸೂಚನೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ರಾಜಕೀಯ ಸಂಬಂಧ ಸುಧಾರಣೆ: ನಾಯಕತ್ವ ಹಾಗೂ ಕುಟುಂಬ ರಾಜಕಾರಣದ ವಿಚಾರವಾಗಿ ತೀವ್ರ ವಾಕ್ಸಮರ ನಡೆಸಿದ್ದ ಉಭಯ ನಾಯಕರು ಒಟ್ಟಿಗೆ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಧಾರ್ಮಿಕ ಕಾರ್ಯಕ್ರಮ ಭೇಟಿ: ಛಬ್ಬಿ ಗ್ರಾಮದಲ್ಲಿ ಜೈನ ಮುನಿಗಳ ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಷಮಾವಳಿ ಪರ್ವದಲ್ಲಿ ಇಬ್ಬರೂ ನಾಯಕರು ಭಾಗವಹಿಸಿದ್ದರು.

ಧರ್ಮ ರಕ್ಷಣೆ ಮತ್ತು ಸಮಾಜಸೇವೆ: ಸನಾತನ ಧರ್ಮದ ಉಳಿವಿನಲ್ಲಿ ಜೈನ ಧರ್ಮದ ಕೊಡುಗೆ ಅಪಾರವಾಗಿದ್ದು, ಗೋಸೇವೆ ಹಾಗೂ ಧರ್ಮರಕ್ಷಣೆಯಲ್ಲಿ ತೊಡಗಿಸಿಕೊಂಡವರಿಗೆ ಸೋಲು ಎಂಬುದು ಕನಸಿನ ಮಾತು ಎಂದು ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ.

ಸನಾತನ ಧರ್ಮದ ಸ್ವಾಮೀಜಿಗಳ ಆಶೀರ್ವಾದ ಇರುವವರೆಗೆ ಸಮಾಜಸೇವೆಯೇ ನನ್ನ ಮೊದಲ ಆದ್ಯತೆ ಎಂದು ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರೆ, ಜೈನ ಧರ್ಮದ “ಬಾಳು ಮತ್ತು ಬದುಕಲು ಬಿಡು” ಹಾಗೂ ಅಹಿಂಸೆಯ ತತ್ವಗಳು ಮನುಕುಲಕ್ಕೆ ಸದಾ ಬೆಳಕು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಬಾಳಿಕಾಯಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *