Home ದಾವಣಗೆರೆ ದಾವಣಗೆರೆಯನ್ನು ಐಟಿ-ಬಿಟಿ ಹಾಗೂ ಕೈಗಾರಿಕಾ ಹಬ್ ಆಗಿ ರೂಪಿಸಲು ‘ವಿಷನ್ ದಾವಣಗೆರೆ’ ಕಾರ್ಯಪ್ರವೃತ್ತ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯನ್ನು ಐಟಿ-ಬಿಟಿ ಹಾಗೂ ಕೈಗಾರಿಕಾ ಹಬ್ ಆಗಿ ರೂಪಿಸಲು ‘ವಿಷನ್ ದಾವಣಗೆರೆ’ ಕಾರ್ಯಪ್ರವೃತ್ತ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆಯನ್ನು ಐಟಿ–ಬಿಟಿ, ನವೋದ್ಯಮ ಹಾಗೂ ಕೈಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ “ವಿಷನ್ ದಾವಣಗೆರೆ” ತಂಡ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಯುವಜನರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದರ ಜೊತೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಜಿಲ್ಲೆಗೆ ಆಕರ್ಷಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿಆಯೋಜಿಸಿದ್ದ ನವೋದ್ಯಮಗಳ ಆಲೋಚನೆಗಳ ಪ್ರಸ್ತುತಿ (ಸ್ಟಾರ್ಟ್‌ಅಪ್ ಪಿಚ್ಚಿಂಗ್ ಸೆಷನ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಪ್ರತಿವರ್ಷ ಸುಮಾರು 10 ಸಾವಿರ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸುತ್ತಿದ್ದಾರೆ. ಇಷ್ಟೊಂದು ಪ್ರತಿಭಾವಂತ ಮಾನವ ಸಂಪನ್ಮೂಲ ಲಭ್ಯವಿದ್ದರೂ ಐಟಿ–ಬಿಟಿ ಕ್ಷೇತ್ರದಲ್ಲಿ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.
ಚುನಾವಣಾ ಪ್ರಚಾರದ ಸಂದರ್ಭದಿಂದಲೇ ದಾವಣಗೆರೆಗೆ ಐಟಿ–ಬಿಟಿ ಕಂಪನಿಗಳನ್ನು ಕರೆತರುವ ಕನಸು ಹೊಂದಿದ್ದೆ. ಸಂಸದೆಯಾಗಿ ಆಯ್ಕೆಯಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚಿಸಿ, ಈ ಗುರಿಯನ್ನು ಸಾಕಾರಗೊಳಿಸಲು ಪ್ರತ್ಯೇಕ “ವಿಷನ್ ದಾವಣಗೆರೆ” ತಂಡ ರಚಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ತಂಡವು ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ನವೋದ್ಯಮಗಳಿಗೆ ಆರ್ಥಿಕ ನೆರವು, ತಜ್ಞರ ಮಾರ್ಗದರ್ಶನ

ನವೋದ್ಯಮಗಳ ಆಲೋಚನೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ 70ಕ್ಕೂ ಹೆಚ್ಚು ತಂಡಗಳು ಆಗಮಿಸಿರುವುದು ಸಂತಸದ ಸಂಗತಿ. ಆರಂಭದಲ್ಲಿ ಸುಮಾರು 30 ತಂಡಗಳು ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ ಯುವಜನರ ಉತ್ಸಾಹ ನಿರೀಕ್ಷೆ ಮೀರಿದೆ. ಪ್ರತಿಯೊಂದು ತಂಡಕ್ಕೂ ತಮ್ಮ ಆಲೋಚನೆಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ನವೋದ್ಯಮಗಳ ಆಲೋಚನೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಎಷ್ಟರಮಟ್ಟಿಗೆ ಪೂರಕವಾಗಿವೆ ಎಂಬುದನ್ನು ಪರಿಶೀಲಿಸಲಾಗುವುದು. ಆರಂಭಿಕ ಹಂತದಲ್ಲಿರುವ ಆಲೋಚನೆಗಳನ್ನು ಉದ್ಯಮವಾಗಿ ರೂಪಿಸಲು ತಜ್ಞರ ಮಾರ್ಗದರ್ಶನ ನೀಡಲಾಗುವುದು. ಅಗತ್ಯವಿರುವ ಆರ್ಥಿಕ ನೆರವು ಮತ್ತು ಹೂಡಿಕೆದಾರರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದಲ್ಲಿ ಮುಂಬರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ದಾವಣಗೆರೆಯ ಆಯ್ದ ನವೋದ್ಯಮಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಜಾಗತಿಕ ಹೂಡಿಕೆದಾರರು, ಉದ್ಯಮ ತಜ್ಞರು ಹಾಗೂ ತಂತ್ರಜ್ಞಾನ ಕಂಪನಿಗಳ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸಲು ಇದರಿಂದ ಅವಕಾಶ ದೊರೆಯಲಿದೆ ಎಂದು ವಿವರಿಸಿದರು.

ಆರು ತಿಂಗಳಲ್ಲಿ 150 ಆಸನಗಳ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯ

ಬಿಐಇಟಿ ಆವರಣದಲ್ಲಿ ವಿಶ್ವದರ್ಜೆಯ ಐಟಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ 150ಕ್ಕೂ ಹೆಚ್ಚು ಆಸನ ಸಾಮರ್ಥ್ಯದ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಇದರಿಂದ ಕಂಪನಿಗಳು ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಕಾರ್ಯಾರಂಭ ಮಾಡಲು ಅನುಕೂಲವಾಗಲಿದೆ ಎಂದರು.
ಬಿಐಇಟಿ ಮಾತ್ರವಲ್ಲದೆ ಜೈನ್ ಸಂಸ್ಥೆ, ದಾವಣಗೆರೆ ವಿಶ್ವವಿದ್ಯಾಲಯ, ಜಿಎಂಐಟಿ ಸೇರಿದಂತೆ ಜಿಲ್ಲೆಯ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ನಡುವೆ ಸಂಪರ್ಕ ಬೆಳೆಸುವ ಮೂಲಕ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ಪ್ರಯತ್ನ

ದಾವಣಗೆರೆಯ ಕೆಎಸ್‌ಆರ್‌ಟಿಸಿ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಒಂದು ಲಕ್ಷ ಚದರ ಅಡಿಗೂ ಹೆಚ್ಚಿನ ಸ್ಥಳಾವಕಾಶವನ್ನು ಬಳಸಿಕೊಂಡು ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ) ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಅಧಿಕಾರಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ಆರುರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಈ ಪ್ರಯತ್ನಗಳಿಗೆ ಸ್ಪಷ್ಟ ರೂಪ ನೀಡುವ ನಿರೀಕ್ಷೆಯಿದೆ. ದಾವಣಗೆರೆಯನ್ನು ತಂತ್ರಜ್ಞಾನ ಕ್ಲಸ್ಟರ್ ಆಗಿ ಘೋಷಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮುಂದಾಗುವ ಕಂಪನಿಗಳಲ್ಲಿ ವಿಶ್ವಾಸ ಮೂಡಲಿದೆ ಎಂದರು.

ಕೈಗಾರಿಕೆಗಳ ಸ್ಥಾಪನೆಗೆ ಹೂಡಿಕೆದಾರರ ಆಕರ್ಷಣೆ

ವಿಷನ್ ದಾವಣಗೆರೆ ತಂಡವು ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಡ್ಯ ಸೇರಿದಂತೆ ವಿವಿಧೆಡೆ ನಡೆದ ತಂತ್ರಜ್ಞಾನ ಶೃಂಗಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಕೆಡಿಇಎಂ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ದಾವಣಗೆರೆಯಲ್ಲಿ ಹೂಡಿಕೆ ಅವಕಾಶಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಐಟಿ ಕ್ಷೇತ್ರದ ಜೊತೆಗೆ ಗಾರ್ಮೆಂಟ್, ತಂತ್ರಜ್ಞಾನೇತರ ಹಾಗೂ ಇತರ ಉತ್ಪಾದನಾ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿರುವ ಅವಕಾಶಗಳನ್ನು ಹೂಡಿಕೆದಾರರಿಗೆ ಪರಿಚಯಿಸಲಾಗುತ್ತಿದೆ. ಸರ್ಕಾರದ ನೀತಿಗಳ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸಹಕಾರ ಒದಗಿಸುವ ಕುರಿತು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.

ದಾವಣಗೆರೆಗೆ ವಿಮಾನ ನಿಲ್ದಾಣ ಅಗತ್ಯ

ರಸ್ತೆ ಹಾಗೂ ರೈಲು ಸಂಪರ್ಕದ ದೃಷ್ಟಿಯಿಂದ ದಾವಣಗೆರೆ ಅನುಕೂಲಕರ ಸ್ಥಳದಲ್ಲಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳು ಸುಮಾರು ಒಂದೂವರೆ ಗಂಟೆಗಳ ಪ್ರಯಾಣದ ಅಂತರದಲ್ಲಿವೆ. ಆದರೂ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಕೈಗಾರಿಕಾ ಹೂಡಿಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು.
ದಾವಣಗೆರೆಗೆ ವಿಮಾನ ನಿಲ್ದಾಣ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮನವಿ ಮಾಡುತ್ತಿದ್ದೇನೆ. ಈ ಸಂಬಂಧ ಮತ್ತೊಮ್ಮೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಎಸ್. ಬಸವರಾಜಪ್ಪ, ವಿ.ಎಸ್., ಸಚಿನ್, ಸತೀಶ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೆಡಿಇಎಂ, ಯುಬಿಡಿಟಿ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನವೋದ್ಯಮ ತಂಡಗಳು ಪಾಲ್ಗೊಂಡಿದ್ದವು.

‘ಆಕ್ಸ್‌ಫರ್ಡ್ ಮತ್ತು ಮ್ಯಾಂಚೆಸ್ಟರ್’ ಆಗಲಿ ದಾವಣಗೆರೆ

ಒಂದು ಕಾಲದಲ್ಲಿ ಜವಳಿ ಉದ್ಯಮದ ಮೂಲಕ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಗುರುತಿಸಿಕೊಂಡಿದ್ದ ದಾವಣಗೆರೆ, ಇಂದು ಶೈಕ್ಷಣಿಕ ಸಂಸ್ಥೆಗಳ ಮೂಲಕ ಕರ್ನಾಟಕದ ಆಕ್ಸ್‌ಫರ್ಡ್ ಎಂಬ ಹೆಗ್ಗಳಿಕೆ ಪಡೆದಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳೆರಡರಲ್ಲಿಯೂ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿ ದಾವಣಗೆರೆಯನ್ನು ರೂಪಿಸುವುದು ನಮ್ಮೆಲ್ಲರ ಕನಸಾಗಿದೆ’ ಎಂದರು.

ಯುವಜನರು ತಮ್ಮಲ್ಲಿರುವ ಪ್ರತಿಭೆ, ಹೊಸ ಆಲೋಚನೆ ಹಾಗೂ ಉದ್ಯಮಶೀಲತೆಯ ಉತ್ಸಾಹವನ್ನು ಕಳೆದುಕೊಳ್ಳಬಾರದು. ಉತ್ತಮ ಆಲೋಚನೆಗಳನ್ನು ಯಶಸ್ವಿ ಉದ್ಯಮಗಳನ್ನಾಗಿ ಪರಿವರ್ತಿಸಲು ನಿರಂತರ ಪ್ರಯತ್ನ, ಸೂಕ್ತ ಮಾರ್ಗದರ್ಶನ ಮತ್ತು ಸಮಾನ ಮನಸ್ಕರ ಸಹಕಾರ ಅಗತ್ಯ. ಯುವಜನರ ಕನಸುಗಳಿಗೆ ಬೆಂಬಲ ನೀಡಲು ವಿಷನ್ ದಾವಣಗೆರೆ ತಂಡ ಸದಾ ಸಿದ್ಧವಿದೆ ಎಂದು ಹೇಳಿದರು.

ದಾವಣಗೆರೆಯ ಯುವಜನರಲ್ಲಿ ಪ್ರತಿಭೆ ಮತ್ತು ಹೊಸ ಆಲೋಚನೆಗಳಿಗೆ ಕೊರತೆಯಿಲ್ಲ. ಅವರಿಗೆ ಸೂಕ್ತ ಅವಕಾಶ, ಮೂಲಸೌಕರ್ಯ ಹಾಗೂ ಹೂಡಿಕೆದಾರರ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲೆಯನ್ನು ಜಾಗತಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಭೂಪಟದಲ್ಲಿ ಗುರುತಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ.

— ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದರು.ದಾವಣಗೆರೆ 

Share

Leave a comment

Leave a Reply

Your email address will not be published. Required fields are marked *