Home ಕ್ರೈಂ ನ್ಯೂಸ್ ಅನೈತಿಕ ಸಂಬಂಧ, ಹಳೇ ದ್ವೇಷದ ಹಿನ್ನೆಲೆ ಹೊನ್ನಾಳಿ ಪಟ್ಟಣದಲ್ಲಿ ಯುವಕನ ಕೊಲೆ: 7 ಮಂದಿ ಆರೋಪಿಗಳ ಬಂಧನ, ಮಾರಕಾಸ್ತ್ರಗಳು ವಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನೈತಿಕ ಸಂಬಂಧ, ಹಳೇ ದ್ವೇಷದ ಹಿನ್ನೆಲೆ ಹೊನ್ನಾಳಿ ಪಟ್ಟಣದಲ್ಲಿ ಯುವಕನ ಕೊಲೆ: 7 ಮಂದಿ ಆರೋಪಿಗಳ ಬಂಧನ, ಮಾರಕಾಸ್ತ್ರಗಳು ವಶ!

Share
ಹೊನ್ನಾಳಿ
Share

ದಾವಣಗೆರೆ: ದಸರಾ ಹಬ್ಬದ ರಾತ್ರಿ ಪುರಾಣ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುತ್ತಿದ್ದ ಯುವಕನೊಬ್ಬನ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸರು 7  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.

ಹೊನ್ನಾಳಿ ನಗರದ ಗಣೇಶ (23),  ಚಂದ್ರಶೇಖರ್ ಯಾನೆ ಕಾರದಪುಡಿ ಚಂದ್ರು (30), ಆಕಾಶ್ ಸಿ.ಎಲ್ ಯಾನೆ ತುಪ್ಪ ಆಕಾಶ್ (26)  ಸಂದೀಪ್ ಎನ್. (25), ಪುನೀತ್ (27) , ಶಿವಮೊಗ್ಗದ ಮಣಿಕಂಠ (30), ವಿನಯ್ ಕುಮಾರ್  (31) ಬಂಧಿತ ಹಂತಕರು.

ಅಮಿತ್ ಎಂಬ ಯುವಕ ಹತ್ಯೆಗೀಡಾಗಿದ್ದ. ದಸರಾ ಹಬ್ಬದ ಪ್ರಯುಕ್ತ ದುರ್ಗಿಗುಡಿ ಬಡಾವಣೆಯ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನಡೆದ ಪುರಾಣ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ತೆರಳಿದ್ದನು. ನಂತರ ರಾತ್ರಿ ವಾಪಸ್ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟಿ ಮತ್ತು ಕಾರಿನಲ್ಲಿ ಬಂದ ಒಟ್ಟು 6ಕ್ಕೂ ಹೆಚ್ಚು ಆರೋಪಿಗಳು ಏಕಾಏಕಿ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕ್ಷಿಪ್ರ ಕಾರ್ಯಾಚರಣೆ: ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶೇಖರ್ ಹೆಚ್.ಟಿ. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರುದ್ರಪ್ಪ ಎಸ್ ಉಜ್ಜನಕೊಪ್ಪ ಹಾಗೂ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಹೆಚ್. ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ.

ಅನೈತಿಕ ಸಂಬಂಧದ ಶಂಕೆ: ಮೃತ ಅಮಿತ್ ಮತ್ತು ಆರೋಪಿ ಗಣೇಶ ಸ್ನೇಹಿತರಾಗಿದ್ದು, ಗಣೇಶನ ಹೆಂಡತಿಯೊಂದಿಗೆ ಅಮಿತ್ ಅನೈತಿಕ ಸಂಬಂಧ ಹೊಂದಿದ್ದ ವಿಚಾರವೇ ಹಳೆ ದ್ವೇಷಕ್ಕೆ ಹಾಗೂ ಕೊಲೆಗೆ ಪ್ರಮುಖ ಕಾರಣವಾಗಿದೆ.

ವಶಪಡಿಸಿಕೊಂಡ ವಸ್ತುಗಳು: ಕೃತ್ಯಕ್ಕೆ ಬಳಸಲಾದ 1 ಸ್ಕೂಟಿ, 2 ಬೈಕ್, 1 ಬುಲೆಟ್ ಬೈಕ್, 1 ಬುಲೇರೋ ವಾಹನ, 2 ಮಚ್ಚುಗಳು, 3 ಚಾಕುಗಳು, 2 ಕಪ್ಪುಬಣ್ಣದ ಮುಖ ಕವಚಗಳು ಹಾಗೂ ಖಾರದ ಪುಡಿ ಕವರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ತನಿಖೆಗೆ ಸೂಚನೆ ನೀಡಿದ್ದರ ಪರಿಣಾಮವಾಗಿ, ತನಿಖೆ ಕೈಗೊಂಡ ಪೊಲೀಸರು ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *