ಬೆಂಗಳೂರು: ಕರ್ನಾಟಕ ಸರ್ಕಾರವು ತನ್ನ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದಲ್ಲೇ (ಹೆಡ್‌ಕ್ವಾರ್ಟರ್ಸ್) ವಾಸಿಸುವುದನ್ನು ಖಚಿತಪಡಿಸಿಕೊಳ್ಳಲು ಹೊಸ ಕ್ರಮ ಕೈಗೊಂಡಿದೆ. ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ಮತ್ತು ನೌಕರರ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಿಯೋ-ಲೊಕೇಷನ್ ಆಧಾರಿತ ರಾತ್ರಿ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನವೆಂಬರ್ 1 ರಿಂದ ‘ಕರ್ತವ್ಯ’ ಮೊಬೈಲ್ ಆ್ಯಪ್ ಮೂಲಕ ಇದು ಕಾರ್ಯರೂಪಕ್ಕೆ ಬರಲಿದೆ.
ಉಪ ಲೋಕಾಯುಕ್ತರ ತನಿಖೆ ವೇಳೆ ಹಲವು ಸರ್ಕಾರಿ ನೌಕರರು ತಮಗೆ ನಿಗದಿಯಾದ ಸ್ಥಳಗಳಲ್ಲಿ ಇರದೆ, ದೂರದ ಪ್ರದೇಶಗಳಿಂದ ಆಡಳಿತ ನಿರ್ವಹಣೆ ಮಾಡುತ್ತಿದ್ದುದು ಕಂಡುಬಂದಿತ್ತು. ಇದರಿಂದ ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ತಡೆಯಲು ಪ್ರಜಾಸೇವೆ ಇಲಾಖೆಯು ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಈ ಮಹತ್ವದ ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಈ ನಿಯಮ ಅನ್ವಯವಾಗಲಿದೆ.
ರಾತ್ರಿ ಹಾಜರಾತಿ ಸಮಯ: ವೈದ್ಯರು ಪ್ರತಿದಿನ ರಾತ್ರಿ 9 ಗಂಟೆಯ ನಂತರ ತಮ್ಮ ನಿಯೋಜಿತ ಕೇಂದ್ರಸ್ಥಾನದ ಭೌಗೋಳಿಕ ಗಡಿಯೊಳಗಿದ್ದು ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿ ದಾಖಲಿಸಬೇಕು.
ರಜೆ ಮತ್ತು ವಿನಾಯಿತಿ: ಮಂಜೂರಾದ ರಜೆಯಲ್ಲಿರುವವರು, ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಹೊರಗೆ ನಿಯೋಜನೆಗೊಂಡವರು ಹಾಗೂ ಪೂರ್ವಾನುಮತಿ ಪಡೆದವರಿಗೆ ವಿನಾಯಿತಿ ಇರಲಿದ್ದು, ಕಾರಣಗಳನ್ನು ಆ್ಯಪ್‌ನಲ್ಲಿ ನಮೂದಿಸಬೇಕು.
ಶಿಸ್ತುಕ್ರಮದ ಎಚ್ಚರಿಕೆ: ಅನುಮತಿಯಿಲ್ಲದೆ ಕೇಂದ್ರಸ್ಥಾನ ತೊರೆಯುವ ನೌಕರರ ವಿರುದ್ಧ ನಾಗರಿಕ ಸೇವಾ ನಿಯಮಾವಳಿಗಳಡಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಾಗುವುದು.
ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ: ಒಪ್ಪಂದ ಮತ್ತು ಹೊರಗುತ್ತಿಗೆ ನೌಕರರಿಗೂ ‘ಕರ್ತವ್ಯ’ ಆ್ಯಪ್ ಕಡ್ಡಾಯವಾಗಿದ್ದು, ನವೆಂಬರ್ 25ರೊಳಗೆ ನೋಂದಣಿ ಪೂರ್ಣಗೊಳಿಸಿ ಡಿಸೆಂಬರ್ 1ರಿಂದ ಆ್ಯಪ್ ಮೂಲಕವೇ ಹಾಜರಾತಿ ನೀಡಬೇಕು. ಜನವರಿ 1, 2027ರಿಂದ ಆ್ಯಪ್ ಹಾಜರಾತಿ ಆಧಾರದ ಮೇಲಷ್ಟೇ ವೇತನ ಬಿಡುಗಡೆಯಾಗಲಿದೆ.
ಆರೋಗ್ಯ ಇಲಾಖೆಯ ಪೈಲಟ್ ಯೋಜನೆಯ ಯಶಸ್ಸನ್ನು ಆಧರಿಸಿ, ಮುಂಬರುವ ದಿನಗಳಲ್ಲಿ ಇತರ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳ ನೌಕರರಿಗೂ ಈ ಲೊಕೇಷನ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
- Government Doctors
- Health Department Karnataka
- Karnataka Government
- Kartavya App
- Location Tracking
- Night Attendance Mandatory
- Outsource Employees Attendance
- Praja Seva Department
- ಕರ್ತವ್ಯ ಆ್ಯಪ್
- ಕರ್ನಾಟಕ ಸರ್ಕಾರ
- ಪ್ರಜಾಸೇವೆ ಇಲಾಖೆ
- ರಾತ್ರಿ ಹಾಜರಾತಿ
- ಲೊಕೇಷನ್ ಟ್ರ್ಯಾಕಿಂಗ್
- ಸರ್ಕಾರಿ ವೈದ್ಯರು
- ಹೆಡ್‌ಕ್ವಾರ್ಟರ್ಸ್ ನಿಯಮ
- ಹೊರಗುತ್ತಿಗೆ ನೌಕರರ ಹಾಜರಾತಿ





Leave a comment