Home ದಾವಣಗೆರೆ ಜಿಎಂಐಟಿ ಕಾಲೇಜಿನ 22ನೇ ಪದವಿ ಪ್ರದಾನ ಸಮಾರಂಭ: 7 ವಿಟಿಯು ರ‍್ಯಾಂಕ್ ಗಳ ವಿದ್ಯಾರ್ಥಿಗಳು ಸೇರಿ 668 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ದಾವಣಗೆರೆನವದೆಹಲಿಬೆಂಗಳೂರು

ಜಿಎಂಐಟಿ ಕಾಲೇಜಿನ 22ನೇ ಪದವಿ ಪ್ರದಾನ ಸಮಾರಂಭ: 7 ವಿಟಿಯು ರ‍್ಯಾಂಕ್ ಗಳ ವಿದ್ಯಾರ್ಥಿಗಳು ಸೇರಿ 668 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Share
ಜಿಎಂಐಟಿ
Share

ದಾವಣಗೆರೆ: ವಿದ್ಯಾರ್ಥಿಗಳು ಕೇವಲ ನೌಕರಿಯ ಬೆನ್ನತ್ತದೆ, ಉನ್ನತ ಶಿಕ್ಷಣ ಪಡೆದು ಸ್ವಂತ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡುವ ಅನ್ನದಾತರಾಗಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಪದವೀಧರರಿಗೆ ಕರೆ ನೀಡಿದರು.

ಅವರು ನಗರದ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 2025-26ನೇ ಸಾಲಿನ ಉತ್ತೀರ್ಣರಾಗಿ ಪದವಿ ಪಡೆಯಲು ಅರ್ಹರಾಗಿರುವ ಬ್ಯಾಚ್‌ನ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ‘ಜಿಎಂ ಹಾಲಮ್ಮ ಆಡಿಟೋರಿಯಂ’ನಲ್ಲಿ ಹಮ್ಮಿಕೊಳ್ಳಲಾಗಿದ್ದ 22ನೇ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ದುಡಿಮೆಯೇ ದೊಡ್ಡದು ಎನ್ನಲಾಗುತ್ತಿತ್ತು. ಆದರೆ ಇಂದು ವಿದ್ಯೆಯೇ ಎಲ್ಲಕ್ಕಿಂತ ಮಿಗಿಲಾದದ್ದು. ವಿದ್ಯಾರ್ಥಿಗಳು ಪದವಿಗಷ್ಟೇ ಸೀಮಿತವಾಗದೆ ಸ್ನಾತಕೋತ್ತರ ಹಾಗೂ ಉನ್ನತ ಶಿಕ್ಷಣದತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

“ಇತ್ತೀಚೆಗೆ ಜಿಎಂ ವಿಶ್ವವಿದ್ಯಾಲಯದಲ್ಲಿ ನಡೆದ ಎಚ್‌ಆರ್ ಕಾನ್ಕ್ಲೇವ್ ನಲ್ಲಿ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸ್ವಂತ ಉದ್ಯಮ ಸ್ಥಾಪಿಸಿ, 40ಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿರುವುದನ್ನು ಕಂಡು ಹೆಮ್ಮೆಯಾಯಿತು. ಪದವೀಧರರು ಸರ್ಕಾರಿ ಅಥವಾ ಖಾಸಗಿ ನೌಕರಿ ಹುಡುಕುವ ಬದಲು ಉದ್ಯಮಶೀಲರಾಗಿ ಬೆಳೆಯಬೇಕು. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಹಾಗೂ ಬ್ಯಾಂಕಿಂಗ್ ಸಾಲ ಯೋಜನೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗ ಪ್ರಾರಂಭಿಸಬೇಕು” ಎಂದು ಸಲಹೆ ನೀಡಿದರು.

ಇಂದು ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಶೇಕಡಾ 50:50ರಷ್ಟು ಸಮಾನತೆ ಬರಬೇಕಿದೆ. ನಮ್ಮ ಕಾಲೇಜಿಗೆ ವಿಟಿಯು (VTU) ಹಂತದಲ್ಲಿ ಈ ಬಾರಿಯ ‘ಫಸ್ಟ್ ರ್ಯಾಂಕ್’ ಸೇರಿದಂತೆ ಒಟ್ಟು 7 ರ‍್ಯಾಂಕ್ ಗಳು ಬಂದಿರುವುದು ಇಡೀ ಸಂಸ್ಥೆಗೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯ. ಸಾಧಕ ವಿದ್ಯಾರ್ಥಿಗಳಿಗೆ ಮುಂದಿನ ಕಾರ್ಯಕ್ರಮದಲ್ಲಿ ನಿಯಮದಂತೆ ಪುರಸ್ಕರಿಸಲಾಗುವುದು ಎಂದು ಪ್ರಕಟಿಸಿದರು.

ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣ ಪಡೆದ ನಂತರವೂ ಯುಪಿಎಸ್ಸಿ ಪರೀಕ್ಷೆಗಳನ್ನು ಬರೆದು ಐಎಎಸ್, ಐಪಿಎಸ್ ಅಥವಾ ಐಆರ್‌ಎಸ್ ಅಧಿಕಾರಿಗಳಾಗಬಹುದು. ಪ್ರಾಮಾಣಿಕತೆಯಿಂದ ಶ್ರಮಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಂಡಿತ ಸಾಧ್ಯ” ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

ಮುಖ್ಯ ಅತಿಥಿಗಳಾಗಿದ್ದ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಆರ್. ಶಂಕಪಾಲ್ ಅವರು ಪದವಿ ಪ್ರದಾನ ಮಾಡಿ, ಭಾಷಣ ಮಾಡುತ್ತಾ, ಇಂದು ನೀವು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸುತ್ತಿದ್ದೀರಿ, ಆದರೆ ನಾಳೆಯಿಂದ ನಿಮ್ಮ ಕಾರ್ಯಗಳ ಮೂಲಕ ಈ ಪದವಿಯ ಮೌಲ್ಯವನ್ನು ಸಾಬೀತುಪಡಿಸಬೇಕಾಗಿದೆ̤. ನಿಮ್ಮ ಯಶಸ್ಸನ್ನು ನೀವು ಗಳಿಸುವ ಹುದ್ದೆ ಅಥವಾ ಸಂಪತ್ತಿನಿಂದ ಮಾತ್ರ ಅಳೆಯಲಾಗುವುದಿಲ್ಲ; ಬದಲಿಗೆ ನೀವು ಇತರರ ಜೀವನದಲ್ಲಿ ತರುವ ಬದಲಾವಣೆ ಮತ್ತು ಎತ್ತಿಹಿಡಿಯುವ ಮೌಲ್ಯಗಳಿಂದ ಅಳೆಯಲಾಗುತ್ತದೆ. ನಿಮ್ಮ ಪದವಿ ನಿಮ್ಮ ಅರ್ಹತೆ, ನಿಮ್ಮ ವ್ಯಕ್ತಿತ್ವ ನಿಮ್ಮ ಬಲವಾದ ಬುನಾದಿ, ಹಾಗೂ ನಿಮ್ಮ ಕೊಡುಗೆಯೇ ನಿಮ್ಮ ಪರಂಪರೆ ಎಂದು ತಿಳಿಸಿದರು.

ಧೈರ್ಯದಿಂದ ಕಲ್ಪಿಸಿಕೊಳ್ಳಿ, ಸೃಜನಶೀಲವಾಗಿ ನಾವೀನ್ಯತೆಯನ್ನು ಕಂಡುಕೊಳ್ಳಿ, ಶ್ರದ್ಧೆಯಿಂದ ಕೆಲಸ ಮಾಡಿ, ನೈತಿಕವಾಗಿ ನಡೆದುಕೊಳ್ಳಿ, ನಿರಂತರವಾಗಿ ಕಲಿಯುತ್ತಿರಿ, ಉದಾರವಾಗಿ ಕೊಡುಗೆ ನೀಡಿ, ಜವಾಬ್ದಾರಿಯುತವಾಗಿ ಬದುಕಿ ಎಂದು ಪದವೀಧರರಿಗೆ ಯಶಸ್ಸಿನ ಈ ೭ ಪ್ರಮುಖ ಸೂತ್ರಗಳ ತಿಳಿಸಿದರಲ್ಲದೇ, ಆತ್ಮವಿಶ್ವಾಸದಿಂದ ಮುನ್ನಡೆದು ಭಾರತದ ಪ್ರಗತಿಗೆ ಶ್ರಮಿಸಲು ಹಾಗೂ ಇಂಜಿನಿಯರಿಂಗ್ ಜ್ಞಾನವನ್ನು ಬಳಸಿಕೊಂಡು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದೇ ವೇಳೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮಟ್ಟದಲ್ಲಿ ಜಿಎಂಐಟಿ ಕಾಲೇಜಿಗೆ 7 ರ‍್ಯಾಂಕ್ ಗಳ ತಂದ ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ಮೀನಾಕ್ಷಿ ವಿ.ಬಿ (ಮೊದಲ ರ‍್ಯಾಂಕ್ -ಚಿನ್ನದ ಪದಕ), ಕಿರಣ್ ಜೆ (2ನೇ ರ‍್ಯಾಂಕ್), ಪುಣ್ಯ ಟಿ.ಎಮ್ (4ನೇ ರ‍್ಯಾಂಕ್), ಎಸ್. ದೀಪ್ತಿ (5ನೇ ರ‍್ಯಾಂಕ್), ಸುಕೃತಿ ಎಸ್. ಜಂಪಣ್ಣನವರ್ (6ನೇ ರ‍್ಯಾಂಕ್), ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ರೇವತಿ ಜಿ (4ನೇ ರ‍್ಯಾಂಕ್), ಬಯೋಟೆಕ್ನಾಲಜಿ ವಿಭಾಗದ ಮಮತಾ ಹೆಚ್.ಜಿ ( 9ನೇ ರ‍್ಯಾಂಕ್) ಸೇರಿದಂತೆ ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 668 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ. ಕೆ. ದಿವ್ಯಾನಂದ, ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ದಾವಣಗೆರೆ-ಹರಿಹರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷರಾದ ಮುರುಗೇಶ್ ಆರಾಧ್ಯ, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಸ್. ಓಂಕಾರಪ್ಪ, ಶ್ರೀಶೈಲ ಎಜುಕೇಷನಲ್ ಟ್ರಸ್ಟ್, ಗವರ್ನಿಂಗ್ ಕೌನ್ಸಿಲ್, ಪ್ರಾಂಶುಪಾಲರು, ವಿವಿಧ ವಿಭಾಗಗಳ ಡೀನ್‌ ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಶಿವನಗೌಡ ಸ್ವಾಗತಿಸಿದರು. ರೋಬೋಟಿಕ್ಸ್ ಮತ್ತು ಆಟೊಮೇಷನ್ (RA) ವಿಭಾಗದ ಮುಖ್ಯಸ್ಥರಾದ ಡಾ. ರಾಜಶೇಖರ ಸೋಮಸಾಗರ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಅನುಷಾ ಎನ್.ಎಲ್. ಮತ್ತು ಡಾ. ಗಣೇಶ್ ಜಿ. ಟಿಳ್ವೆ ನಿರೂಪಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles