ದಾವಣಗೆರೆ:ಕರ್ನಾಟಕದ ತ್ರಿ-ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ (ಒ.ಬಿ.ಸಿ) ರಾಜಕೀಯ ಪ್ರಾತಿನಿಧ್ಯವು ಪ್ರಸ್ತುತ ಸಂವಿಧಾನಿಕ, ಕಾನೂನಾತ್ಮಕ ಹಾಗೂ ಸಾಮಾಜಿಕ ಹಕ್ಕುಚ್ಯುತಿಗೆ ಸಿಲುಕಿದೆ ಎಂದು ದಾವಣಗೆರೆಯ ವಿದ್ಯಾವರ್ಧಕ ಸಂಘ ಮತ್ತು ಸ್ವಾಭಿಮಾನಿ ಬಳಗ ಗಂಭೀರ ಆತಂಕ ವ್ಯಕ್ತಪಡಿಸಿದೆಯಲ್ಲದೇ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಮರ್ಪಕವಾಗಿ ಮೀಸಲಾತಿ ನೀಡದೇ ರಾಜಕೀಯವಾಗಿ ಮೋಸ ಮಾಡಲಾಗಿದೆ ಎಂದು ದೂರಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಒಬಿಸಿ ಜನಸಂಖ್ಯೆ ಶೇಕಡಾ 44.4ರಷ್ಟಿದ್ದರೂ ಕೇವಲ 17-18% ಮೀಸಲಾತಿ ಮಾತ್ರ ನೀಡಲಾಗಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಈ ಸಮುದಾಯಗಳನ್ನು ಕಡೆಗಣನೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಕರಡು ಅಧಿಸೂಚನೆಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ, ರಾಜ್ಯದ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳನ್ನು ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ರಾಜಕೀಯವಾಗಿ ಅಂಚಿಗೆ ತಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ 31 ಜಿಲ್ಲೆಗಳ 1,229 ಜಿಲ್ಲಾ ಪಂಚಾಯತ್ ಹಾಗೂ 239 ತಾಲ್ಲೂಕು ಪಂಚಾಯತಿಗಳ 3,656 ಸ್ಥಾನಗಳ ಮೀಸಲಾತಿ ಹಂಚಿಕೆಯ ಸಮಗ್ರ ಅಂಕಿ-ಅಂಶಗಳ ಪ್ರಕಾರ, ಜಿಲ್ಲಾ ಪಂಚಾಯತ್ನಲ್ಲಿ ಒ.ಬಿ.ಸಿ. ಮೀಸಲಾತಿ ಕೇವಲ 18.4% (226 ಸ್ಥಾನಗಳು) ಇದ್ದರೆ, ತಾಲ್ಲೂಕು ಪಂಚಾಯತ್ನಲ್ಲಿ 17.2% (630 ಸ್ಥಾನಗಳು) ಮಾತ್ರ ಲಭಿಸಿದೆ. ದತ್ತಾಂಶ ವಿಶ್ಲೇಷಣೆಯ ಪ್ರಕಾರ, ಜಿಲ್ಲಾ ಪಂಚಾಯತಿಗಳಲ್ಲಿ ಹಿಂದುಳಿದ ವರ್ಗ ‘ಎ’ ಗೆ ಕೇವಲ 183 ಹಾಗೂ ‘ಬಿ’ ಗೆ 43 ಸ್ಥಾನಗಳು ಮಾತ್ರ ಲಭಿಸಿವೆ. ಒಟ್ಟು ಗ್ರಾಮೀಣ ಸೀಟುಗಳಲ್ಲಿ ಒ.ಬಿ.ಸಿಗಳ ಪಾಲು ಕೇವಲ ಶೇ. 17-18% ಕ್ಕೆ ಸೀಮಿತವಾಗಿದ್ದು, ಒ.ಬಿ.ಸಿ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಇದು ಭಾರೀ ರಾಜಕೀಯ ಅನ್ಯಾಯವಾಗಿದೆ ಎಂದು ಅವರು ದೂರಿದರು.
ಜಿ. ಬಿ. ವಿನಯ್ ಕುಮಾರ್ ಹೇಳಿದ್ದೇನು?
ನ್ಯಾಯಮೂರ್ತಿ ಕೆ. ಭಕ್ತವತ್ಸಲ ವರದಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆಯು ಸುಮಾರು 44.4% ರಷ್ಟಿದೆ ಎಂದು ಅಂದಾಜಿಸಲಾಗಿದ್ದು, ಹಿಂದುಳಿದ ವರ್ಗಗಳಿಗೆ ಕನಿಷ್ಠ ಶೇ. 33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಬೇಕೆಂದು ಸಮಿತಿಯು ಸರ್ಕಾರಕ್ಕೆ ಸ್ಪಷ್ಟವಾಗಿ ಶಿಫಾರಸು ಮಾಡಿತ್ತು.
ಜಾತಿ ಸಮೀಕ್ಷೆ ಆತಂಕ: ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಆಯೋಗ ನಡೆಸಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ (Caste Census) ಅಂಕಿ-ಅಂಶಗಳನ್ನು ಕಡೆಗಣಿಸಿ, ಹಳೆಯ ಪದ್ಧತಿಯಂತೆ ಸೀಟುಗಳನ್ನು ಕಡಿತಗೊಳಿಸಿರುವುದು ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಸುಪ್ರೀಂ ಕೋರ್ಟ್ ‘ಟ್ರಿಪಲ್ ಟೆಸ್ಟ್’: ಸ್ಥಳೀಯ ಸಂಸ್ಥೆಗಳಲ್ಲಿ ಒ.ಬಿ.ಸಿ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ‘ಟ್ರಿಪಲ್ ಟೆಸ್ಟ್’ (Triple Test) ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮೀಸಲಾತಿಯ ಸ್ವರೂಪ ಮತ್ತು ಪರಿಣಾಮವನ್ನು ಅರಿಯಲು ಸಮರ್ಪಿತ ಆಯೋಗವನ್ನು ರಚಿಸಬೇಕು.
ಕ್ಷೇತ್ರವಾರು ಅಸಮಾನತೆ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು ತಾಲ್ಲೂಕು ಪಂಚಾಯತಿಯಲ್ಲಿ ಎಸ್.ಟಿ ಗೆ 4 ಹಾಗೂ ಎಸ್.ಸಿ ಗೆ 2 ಸ್ಥಾನಗಳು ನಿಗದಿಯಾಗಿದ್ದರೂ, ಹಿಂದುಳಿದ ವರ್ಗ ‘ಎ’ ಹಾಗೂ ‘ಬಿ’ ಗೆ ಸೊನ್ನೆ (0) ಸ್ಥಾನ ಸಿಕ್ಕಿದ್ದು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕುಗಳಲ್ಲೂ ಇದೇ ಮಾದರಿಯ ಅಸಮಾನತೆ ಕಂಡುಬಂದಿದೆ.
ದೀರ್ಘಕಾಲೀನ ನಷ್ಟ: ಪಂಚಾಯತ್ ರಾಜ್ ವ್ಯವಸ್ಥೆಯು ಕೇವಲ ಸ್ಥಳೀಯ ಆಡಳಿತವಲ್ಲದೆ, ಮುಂದಿನ ದಿನಗಳಲ್ಲಿ ವಿಧಾನಸಭೆ ಅಥವಾ ಲೋಕಸಭೆಯಂತಹ ಉನ್ನತ ಮಟ್ಟದ ರಾಜಕೀಯದಲ್ಲಿ ನಾಯಕರನ್ನು ಬೆಳೆಸಿಕೊಳ್ಳುವುದನ್ನು ದುಸ್ತರಗೊಳಿಸಿ, ಹಿಂದುಳಿದ ವರ್ಗಗಳನ್ನು ‘ನಾಯಕತ್ವ ರಹಿತ’ ಸಮಾಜವನ್ನಾಗಿ ಮಾಡುವ ಅಪಾಯ ತಂದಿಟ್ಟಿದೆ.
ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯವು ಸರ್ವಪಕ್ಷೀಯ ಒತ್ತಡ ತರಬೇಕು ಹಾಗೂ ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನೈಜ ಜನಸಂಖ್ಯೆಯನ್ನು ಗುರುತಿಸಿ ರೋಟರ್ಪನ್ ನಿಯಮವನ್ನು ಅತ್ಯಂತ ಪಾರದರ್ಶಕವಾಗಿ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.





Leave a comment