ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಶುಕ್ರವಾರ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಜೆಪಿ ಹಮ್ಮಿಕೊಂಡಿದ್ದ ‘ಲೆಹ್ರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ಗೆ ತೆರಳುತ್ತಿದ್ದಾಗ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ, ದೀಪ್ಕೆ ಅವರು ತಂಗಿದ್ದ ಝಂಡೇವಾಲನ್ನ ನಿವಾಸಕ್ಕೆ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನೋಟಿಸ್ ನೀಡಿದ್ದರಿಂದ ಗಂಟೆಗಳ ಕಾಲ ಹೈಡ್ರಾಮಾ ನಡೆಯಿತು.
ಚುನಾವಣಾ ಆಯುಕ್ತರ (CEC) ವಿರುದ್ಧ ಮತ್ತು ಎಸ್ಐಆರ್ (SIR) ಅಕ್ರಮಗಳ ಆರೋಪವನ್ನು ಖಂಡಿಸಿ ಸಿಜೆಪಿ ಈ ಪಾದಯಾತ್ರೆಗೆ ಕರೆ ನೀಡಿತ್ತು. ಝಂಡೇವಾಲನ್ ನಿವಾಸದಲ್ಲಿದ್ದ ದೀಪ್ಕೆ ಹೆಗಲ ಮೇಲೆ ತ್ರಿವರ್ಣ ಧ್ವಜ ಹೊದ್ದು ಮೌನ ಪ್ರತಿಭಟನೆ ನಡೆಸುತ್ತಿದ್ದರೆ, ಪೊಲೀಸರು ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 29ರ ಅಡಿಯಲ್ಲಿ ಕಾನಾಟ್ ಪ್ಲೇಸ್ ವ್ಯಾಪ್ತಿಯಲ್ಲಿ ಯಾವುದೇ ರ್ಯಾಲಿ ಅಥವಾ ಧರಣಿ ನಡೆಸದಂತೆ ಅವರಿಗೆ ನೋಟಿಸ್ ಜಾರಿ ಮಾಡಿದರು. “ನಾನು ಹಿಂಸಾಚಾರಕ್ಕೆ ಕರೆ ನೀಡಿದ್ದೇನೆ ಎಂಬುದಕ್ಕೆ ವೀಡಿಯೊ ಸಾಕ್ಷಿ ತೋರಿಸಿ. ನನ್ನನ್ನು ಗಲ್ಲಿಗೇರಿಸಿ, ಇದೇನು ತಮಾಷೆಯೇ?” ಎಂದು ದೀಪ್ಕೆ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಧ್ವಜ ಹಾರಿಸುವ ಹಕ್ಕು: ನಾವು ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿಲ್ಲ. ಯಾವುದೇ ಮೈಕ್ ಅಥವಾ ಧ್ವನಿವರ್ಧಕ ಬಳಸದೆ ಕೇವಲ ತ್ರಿವರ್ಣ ಧ್ವಜ ಹಾರಿಸುತ್ತಿದ್ದೇವೆ. ಇದಕ್ಕೆ ಏಕೆ ತಡೆ ಎಂದು ದೀಪ್ಕೆ ಪ್ರಶ್ನಿಸಿದರು.
ಕೇಂದ್ರ ದೆಹಲಿಯಲ್ಲಿ ಬಿಗಿ ಭದ್ರತೆ: ಪಾದಯಾತ್ರೆಯ ಹಿನ್ನೆಲೆಯಲ್ಲಿ ಕಾನಾಟ್ ಪ್ಲೇಸ್ ಹಾಗೂ ಸೆಂಟ್ರಲ್ ಪಾರ್ಕ್ ಸುತ್ತಮುತ್ತ ಸುಮಾರು 6,000 ಪೊಲೀಸ್ ಹಾಗೂ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದ್ದು, 5ಕ್ಕಿಂತ ಹೆಚ್ಚು ಜನರು ಕೂಡುವುದನ್ನು ನಿಷೇಧಿಸಲಾಗಿದೆ.
ಹಿಂದಿನ ಬಂಧನಗಳು: ಪ್ರಸ್ತುತ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಈಗಾಗಲೇ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರಕರಣವು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಡೀ ಪಾದಯಾತ್ರೆಗೆ ಅನುಮತಿ ನೀಡದಿದ್ದರೂ, ರಾಷ್ಟ್ರಗೀತೆ ಹಾಡಲು 11 ಜನರಿಗೆ ಮಾತ್ರ ನಿಗದಿತ ಸ್ಥಳದಲ್ಲಿ ಅವಕಾಶ ನೀಡಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.





Leave a comment