ದಾವಣಗೆರೆ: ದಾವಣಗೆರೆಯ ಬಾಡ ಕ್ರಾಸ್ ಬಳಿ ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆ ಬರುತ್ತಿದ್ದ ಸಿಎನ್ಜಿ ತುಂಬಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಜೆ.ಎಚ್. ಪಟೇಲ್ ನಗರದ ನಿವಾಸಿ ಸೃಜನ್ ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕ. ರಾಮ್ ತೇಜ್ ರೆಡ್ಡಿ (17) ಹಾಗೂ ಆದಿತ್ಯ (16) ಗಂಭೀರ ಗಾಯಗೊಂಡ ಬಾಲಕರು.
ಮನೆಯಲ್ಲಿದ್ದ ಕಾರನ್ನು ತೆಗೆದುಕೊಂಡು ಬಾಲಕರು ರೌಂಡ್ಸ್ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಜಾಗರೂಕತೆ ಹಾಗೂ ಅತಿವೇಗದ ಕಾರಣದಿಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಗೆ ಹಿಂಬದಿಯಿಂದ ಅಪ್ಪಳಿಸಿದೆ. ಲಾರಿಯಲ್ಲಿ ಸಿಎನ್ಜಿ ತುಂಬಿರುವುದರಿಂದ ಅಕಸ್ಮಾತ್ ಸಿಎನ್ಜಿ ಸಿಲಿಂಡರ್ ಸ್ಪೋಟಗೊಂಡಿದ್ದರೆ ದೊಡ್ಡ ಪ್ರಮಾಣದ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಅಂತಹ ದೊಡ್ಡ ದುರಂತ ತಪ್ಪಿದೆ. ಈ ಭಯಾನಕ ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಾವಣಗೆರೆ ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಜಾಗರೂಕ ಚಾಲನೆಯೇ ಈ ದುರ್ಘಟನೆಗೆ ಪ್ರಮುಖ ಕಾರಣವಾಗಿದೆ.
ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ವೇಗವಾಗಿ ವಾಹನಗಳನ್ನು ಚಲಾಯಿಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಮಾತ್ರವಲ್ಲ, ಪೋಷಕರು ಅಪ್ರಾಪ್ತರ ಕೈಯಲ್ಲಿ ಕಾರು, ಬೈಕ್ ನೀಡದಂತೆ ಪೊಲೀಸರು ಮನವಿ ಮಾಡಿದ್ದಾರೆ.





Leave a comment