ಮೀರತ್ (ಉತ್ತರ ಪ್ರದೇಶ): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೀರತ್ನ ಕುಖ್ಯಾತ ‘ಬ್ಲೂ ಡ್ರಮ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೀರತ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಪತಿ ಸೌರಭ್ ರಾಜಪೂತ್ ಅವರನ್ನು ಅಮಾನವೀಯವಾಗಿ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಸಿಮೆಂಟ್ ತುಂಬಿದ ಬ್ಲೂ ಡ್ರಮ್ನಲ್ಲಿ ಬಚ್ಚಿಟ್ಟಿದ್ದ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ನ್ಯಾಯಾಲಯ ಗರಿಷ್ಠ ‘ಮರಣದಂಡನೆ’ ಶಿಕ್ಷೆ ವಿಧಿಸಿದೆ.
ಮಹಾಭಾರತ ಉಲ್ಲೇಖಿಸಿದ ನ್ಯಾಯಾಧೀಶರು:
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತೀರ್ಪು ಪ್ರಕಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಮಹಾಭಾರತದ ಪ್ರಸಂಗವನ್ನು ಉಲ್ಲೇಖಿಸಿದರು. “ಸಮಾಜದಲ್ಲಿ ಧರ್ಮ ಮತ್ತು ಸತ್ಕಾರ್ಯಗಳನ್ನು ಎತ್ತಿಹಿಡಿಯಲು ಹಾಗೂ ಅಪರಾಧ ತಡೆಯಲು ಶಿಕ್ಷೆ ನೀಡುವುದು ಕೂಡ ಧರ್ಮದ ಒಂದು ಭಾಗ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರಾಗೃಹದಿಂದಲೇ ಹಾಜರಾಗಿದ್ದ ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್ಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ಖಚಿತಪಡಿಸಲಾಯಿತು. ಕಾನೂನಿನ ಪ್ರಕಾರ ಈ ಮರಣದಂಡನೆ ಶಿಕ್ಷೆಗೆ ಅಲಹಾಬಾದ್ ಹೈಕೋರ್ಟ್ನಿಂದ ಅಂತಿಮ ಅನುಮೋದನೆ ದೊರೆಯಬೇಕಿದೆ.
ಏನಿದು ಭೀಕರ ‘ಬ್ಲೂ ಡ್ರಮ್’ ಹತ್ಯಾಕಾಂಡ?
2025ರ ಮಾರ್ಚ್ 3ರಂದು ಈ ಭೀಕರ ಹತ್ಯೆ ನಡೆದಿತ್ತು. ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಲಾಗಿದ್ದ ಪತಿ ಸೌರಭ್ ರಾಜಪೂತ್ ಅವರನ್ನು ಮುಗಿಸಲು ಮುಸ್ಕಾನ್ ಹಾಗೂ ಪ್ರಿಯಕರ ಸಾಹಿಲ್ ಸಂಚು ರೂಪಿಸಿದ್ದರು. ಕೊಲೆಯ ನಂತರ ಸೌರಭ್ ಅವರ ಮೃತದೇಹವನ್ನು ಕೊಚ್ಚಿ ತುಂಡರಿಸಿ, ಮನೆಯಲ್ಲಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿಟ್ಟು ಅದರೊಳಗೆ ಸಿಮೆಂಟ್ ಮತ್ತು ಮರಳು ತುಂಬಿ ಅಡಗಿಸಿಟ್ಟಿದ್ದರು.
ಸುಮಾರು 13 ತಿಂಗಳ ಕಾಲ ಸುದೀರ್ಘ ವಿಚಾರಣೆ ನಡೆದು, 126 ಆಲಿಕೆಗಳ ನಂತರ, ಮೀರತ್ ಪೊಲೀಸರು ಸಲ್ಲಿಸಿದ್ದ ಸುಮಾರು 1,000 ಪುಟಗಳ ಚಾರ್ಜ್ಶೀಟ್ ಹಾಗೂ ಬಲವಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ಕೋರ್ಟ್ ಸೆಪ್ಟೆಂಬರ್ 30 ರಂದು ಇಬ್ಬರನ್ನೂ ದೋಷಿ ಎಂದು ಘೋಷಿಸಿತ್ತು. ಇದೀಗ ಅಂತಿಮ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ಸಂಭ್ರಮ, ತಾಯಿಯ ಭಾವುಕ ನುಡಿ:
ತೀರ್ಪು ಹೊರಬಿದ್ದ ತಕ್ಷಣವೇ ಮೀರತ್ ನ್ಯಾಯಾಲಯದ ಆವರಣದಲ್ಲಿ ವಕೀಲರು ಹಾಗೂ ಸಾರ್ವಜನಿಕರು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿ ಲಡ್ಡು ಹಂಚಿ ಸಂಭ್ರಮಿಸಿದರು. ಪ್ರಕರಣವನ್ನು ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಬಣ್ಣಿಸಲಾಯಿತು.
ವಿಚಾರಣೆ ವೇಳೆ ಹಾಜರಿದ್ದ ಕೊಲೆಯಾದ ಸೌರಭ್ ಅವರ ತಾಯಿ ರೇಣು ರಾಜಪೂತ್ ಭಾವುಕರಾಗಿ ಮಾತನಾಡಿ, “ದಂಪತಿಗಳ ನಡುವೆ ಸಾಮರಸ್ಯವಿಲ್ಲದಿದ್ದರೆ ಬೇರೆಯಾಗಲಿ, ಆದರೆ ಯಾರದೇ ಮಗುವನ್ನು ಈ ರೀತಿ ದಯವಿಟ್ಟು ಕೊಲ್ಲಬೇಡಿ. ಇಂತಹ ಕ್ರೂರ ಅಪರಾಧ ಎಸಗುವ ಪ್ರತಿಯೊಬ್ಬರಿಗೂ ಗಲ್ಲು ಶಿಕ್ಷೆಯೇ ಸರಿಯಾದ ಪಾಠ” ಎಂದರು. ಗಮನಾರ್ಹ ಸಂಗತಿಯೆಂದರೆ, ಆರೋಪಿ ಮುಸ್ಕಾನ್ ಅವರ ಸ್ವಂತ ಹೆತ್ತವರೇ ಕೋರ್ಟ್ಗೆ ಲಿಖಿತ ಹೇಳಿಕೆ ನೀಡಿ ತಮ್ಮ ಮಗಳಿಗೆ ಮರಣದಂಡನೆ ವಿಧಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ್ದರು.
- Death Penalty Verdict
- Mahabharata Reference
- Meerut Blue Drum Murder Case
- Meerut District Court
- Merchant Navy officer murder
- Muskan Rastogi
- Sahil Shukla
- Saurabh Rajput
- UP Crime news
- ಉತ್ತರ ಪ್ರದೇಶ ಕೊಲೆ ಪ್ರಕರಣ
- ಕನ್ನಡ ಸುದ್ದಿ
- ಮರಣದಂಡನೆ ಶಿಕ್ಷೆ
- ಮಹಾಭಾರತ ಉಲ್ಲೇಖ
- ಮೀರತ್ ಕೋರ್ಟ್ ತೀರ್ಪು
- ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ
- ಮುಸ್ಕಾನ್ ರಸ್ತೋಗಿ
- ಸಾಹಿಲ್ ಶುಕ್ಲಾ
- ಸೌರಭ್ ರಾಜಪೂತ್ ಹತ್ಯೆ





Leave a comment