ದಾವಣಗೆರೆ: ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕನ ಕಣ್ಣಿಗೆ ಕಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಪ್ರದೇಶದಲ್ಲಿ ನಡೆದಿದೆ.
ಹೊನ್ನಾಳಿ ಹೊಸಕೇರಿ ಬಡಾವಣೆ ನಿವಾಸಿ ಹಾಗೂ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅಮಿತ್ (27) ಕೊಲೆಯಾದ ದುರ್ದೈವಿ.
ಹೊನ್ನಾಳಿ ಪಟ್ಟಣದ ಗಣೇಶ್ ಎಂಬಾತನ ಪತ್ನಿ ಜೊತೆ ಅಮಿತ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಹಿಂದೆಯೂ ಗಣೇಶ್ ಮತ್ತು ಅಮಿತ್ ನಡುವೆ ಜಗಳವಾಗಿತ್ತು. ಆದರೆ ನಿನ್ನೆ ರಾತ್ರಿ ತನ್ನ ತಾಯಿಯೊಂದಿಗೆ ದುರ್ಗಿಗುಡಿ ಪ್ರದೇಶದಲ್ಲಿರುವ ಬನ್ನಿ ಮಹಾಕಾಳಿ ದೇವಸ್ಥಾನಕ್ಕೆ ಅಮಿತ್ ಬಂದಿದ್ದ. ಆಗ ಇಲ್ಲಿಗೆ ಬಂದ ಗಣೇಶ್ ಜೊತೆ ಜಗಳವಾಗಿದೆ. ಈ ವೇಳೆ ಅಮಿತ್ ಕಣ್ಣಿಗೆ ಕಾರದ ಪುಡಿ ಎರಚಿದ ಗಣೇಶ್ ತಂದಿದ್ದ ಚೂರಿಯಿಂದ ಇರಿದಿದ್ದಾನೆ.
ತೀವ್ರ ರಕ್ತಸ್ರಾವವಾಗಿ ಬಳಲುತ್ತಿದ್ದ ಅಮಿತ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಸಂಬಂಧ ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





Leave a comment