ನವದೆಹಲಿ:ಜಂತರ್ ಮಂತರ್ ಚಲೋ ಪ್ರತಿಭಟನೆಗೆ ಆಗಮಿಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿ ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ.
ಆದರೆ, ಈ ಬಂಧನ ಕಾರ್ಯಾಚರಣೆಗೆ ದೆಹಲಿ ಪೊಲೀಸರು ಪ್ರಮುಖವಾಗಿ ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ವಿಮಾನದ ಕಿರಿದಾದ ಸಾಲುಗಳಲ್ಲಿ ಸಂಘರ್ಷ ಉಂಟಾದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಗಲಾಟೆ ಅಥವಾ ಕಲಾಪ ಉಂಟಾಗದಂತೆ ತಡೆಯಲು ದೆಹಲಿ ಪೊಲೀಸರು ಈ ರಣತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.
ಜುಲೈ 20ರಂದು ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಗಲಾಟೆ ನಡೆದಿತ್ತು. ಈ ವೇಳೆ ಪುರುಷ ಪೊಲೀಸರು ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿಜೆಪಿ ಆರೋಪಿಸಿತ್ತು.
ಹೀಗಾಗಿ, ಯುವಜನತೆ ಮತ್ತು ಜೆನ್-ಝಿ (Gen Z) ಬೆಂಬಲ ಹೊಂದಿರುವ ಈ ಸಂಘಟನೆಯ ನಾಯಕರ ಬಂಧನ ವೇಳೆ ಯಾವುದೇ ಕೆಟ್ಟ ಸಂದೇಶ ಅಥವಾ ಟೀಕೆಗಳು ಬಾರದಂತೆ ತಡೆಯಲು ಮಹಿಳಾ ಪೊಲೀಸರ ತಂಡವನ್ನು ಕಳುಹಿಸಲಾಗಿತ್ತು.
ಪ್ರಮುಖ ಮುಖ್ಯಾಂಶಗಳು:
ವಿಮಾನದಲ್ಲೇ ಕಾವೇರಿದ ವಾತಾವರಣ: ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪೊಲೀಸರು ಒಳಪ್ರವೇಶಿಸಿದರು. ಈ ವೇಳೆ ಸಿಜೆಪಿ ನಾಯಕರು ‘ಇಂಕಿಲಾಬ್ ಜಿಂದಾಬಾದ್’ ಹಾಗೂ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು.
ದೀಪ್ಕೆ ಆಕ್ರೋಶ: “ವಿಮಾನದಿಂದ ನೇರವಾಗಿ ಬಂಧಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ, ಇದು ತುರ್ತು ಪರಿಸ್ಥಿತಿಗಿಂತಲೂ ಘೋರವಾದ ಸರ್ವಾಧಿಕಾರ” ಎಂದು ನಾಯಕ ಅಭಿಜೀತ್ ದೀಪ್ಕೆ ಪೊಲೀಸರ ನಡೆಗೆ ಕಿಡಿಕಾರಿದರು.
ದೆಹಲಿಯಲ್ಲಿ ಹೈ ಅಲರ್ಟ್: ಪ್ರತಿಭಟನೆ ತಡೆಯಲು ದೆಹಲಿಯಾದ್ಯಂತ ಸುಮಾರು 400ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. 45 ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಬಂದ್ ಮಾಡಲಾಗಿದ್ದು, 23,000ಕ್ಕೂ ಹೆಚ್ಚು ಸಿಆರ್‌ಪಿಎಫ್/ಪ್ಯಾರಾಮಿಲಿಟರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ದೆಹಲಿ ಪೊಲೀಸರ ಈ ಮಹಿಳಾ ತಂತ್ರದಿಂದಾಗಿ ವಿಮಾನದೊಳಗೆ ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿ, ನಾಯಕರನ್ನು ಯಾವುದೇ ದೊಡ್ಡ ಗಲಾಟೆಯಿಲ್ಲದೆ ಸುಲಭವಾಗಿ ಬಂಧಿಸಿ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಲಾಯಿತು.





Leave a comment