ಕೊಲಂಬೊ/ರಿಯಾದ್: ಶ್ರೀಲಂಕಾದ 24 ವರ್ಷದ ಹಿಂದೂ ವಲಸೆ ಕಾರ್ಮಿಕ ಸಿವರಾಸ ಅನೋಜನ್ ಎಂಬ ಯುವಕನಿಗೆ ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರ ಕುಟುಂಬ ಹಾಗೂ ಶ್ರೀಲಂಕಾದ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಜೀವದಾನಕ್ಕಾಗಿ ರಾಜತಾಂತ್ರಿಕ ಹಾಗೂ ಕಾನೂನು ಹೋರಾಟ ಆರಂಭಿಸಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಧಾರ್ಮಿಕ ವಾಗ್ವಾದದ ನಂತರ ಫೇಸ್ಬುಕ್ನಲ್ಲಿ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಕ್ಷಣಿಕ ಕೋಪದಲ್ಲಿ ಕಾಮೆಂಟ್ ಮಾಡಿದ್ದೇ ಈ ಮಹಾಪರಾಧಕ್ಕೆ ಕಾರಣವಾಗಿದೆ.
ಶ್ರೀಲಂಕಾದ ಕಲ್ಮುನೈ ಮೂಲದ ಅನೋಜನ್, ಶ್ರೀಲಂಕಾದಲ್ಲಿ ನಡೆದ ಪವಿತ್ರ ಯಾತ್ರೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಡೆದ ವಾಗ್ವಾದಕ್ಕೆ ಪ್ರತಿಯಾಗಿ ಕಾಮೆಂಟ್ ಮಾಡಿದ್ದರು. ಬಳಿಕ ಅದನ್ನು ತಕ್ಷಣವೇ ಡಿಲೀಟ್ ಮಾಡಿ ಕ್ಷಮಾಪಣೆ ವೀಡಿಯೋ ಪೋಸ್ಟ್ ಮಾಡಿದ್ದರೂ, ಶ್ರೀಲಂಕಾದಿಂದಲೇ ಸೌದಿಯ ಅವರ ಕಂಪನಿಗೆ ಇಮೇಲ್ ಕಳುಹಿಸಿ ದೂರು ನೀಡಲಾಗಿತ್ತು. ಆಲ್-ಅಹ್ಸಾ ಕ್ರಿಮಿನಲ್ ಕೋರ್ಟ್ ಆರಂಭದಲ್ಲಿ 5 ವರ್ಷ ಜೈಲು ಮತ್ತು 3 ಮಿಲಿಯನ್ ಸೌದಿ ರಿಯಾಲ್ ದಂಡ ವಿಧಿಸಿತ್ತು. ಆದರೆ ಸೌದಿ ಪ್ರಾಸಿಕ್ಯೂಟರ್ಗಳು ಶರಿಯಾ ಕಾಯ್ದೆಯಡಿ ಮರಣದಂಡನೆಗೆ ಮೇಲ್ಮನವಿ ಸಲ್ಲಿಸಿದ ನಂತರ ಸೆಪ್ಟೆಂಬರ್ 17 ರಂದು ಅಪೀಲು ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿತು.
ತಾಯಿಯ ಕಣ್ಣೀರಿನ ಮನವಿ: “ನನ್ನ ಮಗ ಮಾಡಿದ ತಪ್ಪನ್ನು ಕ್ಷಮಿಸಿ, ಅವನನ್ನು ಜೀವಂತವಾಗಿ ನಮಗೆ ಮರಳಿಸಿ” ಎಂದು ತಾಯಿ ರಸಮಾಣಿಕ್ಕಂ ಯೋಗಲಕ್ಷ್ಮಿ ಸೌದಿ ಆಡಳಿತಗಾರರಲ್ಲಿ ದಯೆಗಾಗಿ ಭಿಕ್ಷೆ ಬೇಡಿದ್ದಾರೆ.
ಸಂಸದರ ರಾಜತಾಂತ್ರಿಕ ಪತ್ರ: ಶ್ರೀಲಂಕಾದ ತಮಿಳು ಮತ್ತು ಮುಸ್ಲಿಂ ಸಮುದಾಯದ 6 ಸಂಸದರು ಸೌದಿ ವಿದೇಶಾಂಗ ಸಚಿವರಿಗೆ ಪತ್ರ ಬರೆದು ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದಾರೆ.
ಸರ್ಕಾರದ ಕಾನೂನು ಬೆಂಬಲ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರ ಸೂಚನೆಯಂತೆ ಅಡಿಷನಲ್ ಸೊಲಿಸಿಟರ್ ಜನರಲ್ ಅಜಾರ್ಡ್ ನವಾವಿ ನೇತೃತ್ವದ 4 ಸದಸ್ಯರ ವಕೀಲರ ತಂಡ ಸೌದಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ರಿಯಾದ್ಗೆ ತೆರಳುತ್ತಿದೆ.
ಶ್ರೀಲಂಕಾದ ಬೌದ್ಧ ಮತ್ತು ಹಿಂದೂ ಧಾರ್ಮಿಕ ನಾಯಕರು ಕೂಡ ಒಗ್ಗೂಡಿ ಜಂಟಿ ಪ್ರಾರ್ಥನೆ ಹಾಗೂ ಸಹಿ ಸಂಗ್ರಹ ಅಭಿಯಾನವನ್ನು ನಡೆಸುತ್ತಿದ್ದು, ತಮ್ಮ ದೇಶದ ಯುವಕನನ್ನು ಮರಣದಂಡನೆಯಿಂದ ರಕ್ಷಿಸಲು ಸರ್ಕಾರದ ಮಟ್ಟದಲ್ಲಿ ತೀವ್ರ ಪ್ರಯತ್ನಗಳು ನಡೆಯುತ್ತಿವೆ.





Leave a comment