ಮುಂಬೈ: ಬಾಲಿವುಡ್ ಹಿರಿಯ ನಟ ಗೋವಿಂದಾ ಅವರ ಮುಂಬರುವ ‘ರೂಪಾ’ ಸಿನಿಮಾದ ಸಹನಟಿ ರಾಣಿ ಸ್ವರ್ಣಕಾರ್ (ಕೋಮಲ್ ರಾಣಿ), ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜ ಗಣಪತಿ ಮಂಟಪಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ಹಣೆಯಲ್ಲಿ ಸಿಂಧೂರ (ಕುಂಕುಮ) ಧರಿಸಿದ್ದಕ್ಕಾಗಿ ವ್ಯಕ್ತವಾದ ತೀವ್ರ ಟೀಕೆಗಳಿಗೆ ಕಟುವಾಗಿ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ನಟಿ ದಿವ್ಯಾ ಖೋಸ್ಲಾ ಅವರು ರಾಣಿ ಸ್ವರ್ಣಕಾರ್ ಹಾಗೂ ಗೋವಿಂದಾ ಒಟ್ಟಿಗೆ ಗಣೇಶನ ದರ್ಶನಕ್ಕೆ ತೆರಳಿದ್ದನ್ನು ಪ್ರಶ್ನಿಸಿ, “ವಿವಾಹಿತ ಹಿಂದೂ ಮಹಿಳೆಯ ಪವಿತ್ರ ಸಂಕೇತವಾದ ಸಿಂಧೂರವನ್ನು ಧರಿಸಿ ಧರ್ಮದ ಹೆಸರಿನಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ” ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು. ಇದಕ್ಕೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಸುದೀರ್ಘ ಪೋಸ್ಟ್ ಬರೆದು ಪ್ರತ್ಯುತ್ತರ ನೀಡಿರುವ ರಾಣಿ, “ನನ್ನ ಮುಂಬರುವ ‘ರೂಪಾ’ ಚಿತ್ರದ ಯಶಸ್ಸಿಗಾಗಿ ನನ್ನ ಸಿನಿಮಾದ ಹೀರೋ ಜೊತೆ ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಹೋದರೆ ಅದು ನಾಚಿಕೆಗೇಡಿನ ವಿಷಯವೇ, ರಾಷ್ಟ್ರೀಯ ಸಮಸ್ಯೆಯೇ ಅಥವಾ ಪ್ರದರ್ಶನವೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿರುವವರನ್ನು ತೀವ್ರವಾಗಿ ತಳೆದ ರಾಣಿ, “ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಮೂಲೆಗುಂಪಾಗಿರುವ ಮತ್ತು ಬಾಕ್ಸ್ ಆಫೀಸ್ನಲ್ಲಿ ಸಿನಿಮಾಗಳು ಸೋಲುತ್ತಿರುವ ಕೆಲ ನಟಿಯರು, ಸುದ್ದಿಮನೆಯಲ್ಲಿ ಇರಲು ಹಾಗೂ ಪ್ರಚಾರ ಪಡೆಯಲು ಇತರರ ವಿವಾದಗಳಲ್ಲಿ ಮೂಗು ತೂರಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮದೇ ದಾಂಪತ್ಯ ಜೀವನವನ್ನು ಸರಿಯಾಗಿ ನಿಭಾಯಿಸಲಾಗದವರಿಂದ ಅಥವಾ ತಮ್ಮ ಪತಿಯ ಘನತೆಯನ್ನು ಹಾಳುಮಾಡುವ “ಮ್ಯಾನ್-ಈಟರ್ಸ್” (Man-eaters) ರೀತಿಯ ನಾರಿಯರಿಂದ ನಾನು ಸಂಸ್ಕೃತಿ ಹಾಗೂ ಸಿಂಧೂರದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಲಾಲ್ಬಾಗ್ಚಾ ರಾಜನ ಮಂಟಪಕ್ಕೆ ಗೋವಿಂದಾ ಮತ್ತು ರಾಣಿ ಸ್ವರ್ಣಕಾರ್ ಒಂದೇ ದಿನ ಭೇಟಿ ನೀಡಿದ್ದರೆ, ಗೋವಿಂದಾ ಅವರ ಪತ್ನಿ ಸುನೀತಾ ಅಹುಜಾ ಕೂಡ ಪ್ರತ್ಯೇಕವಾಗಿ ದರ್ಶನ ಪಡೆದಿದ್ದರು. ಇದರಿಂದ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಮತ್ತಷ್ಟು ಕಾವು ಸಿಕ್ಕಿತ್ತು. ಆದರೆ ನಟ ಗೋವಿಂದಾ ಅವರು ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ತಮ್ಮ ಹಾಗೂ ರಾಣಿ ನಡುವೆ ಇರುವುದು ಕೇವಲ ವೃತ್ತಿಪರ ಸಂಬಂಧ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.





Leave a comment