ದಾವಣಗೆರೆ: ಪತಿ ನಡೆಸಿದ ಭೀಕರ ಹಲ್ಲೆಯಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಬೇತೂರು ಗ್ರಾಮದಲ್ಲಿ ನಡೆದಿದೆ.
ಬಸಮ್ಮ (೨೫) ಮೃತಪಟ್ಟ ದುರ್ದೈವಿ. ಬಸಮ್ಮ ಹಾಗೂ ನಿಂಗರಾಜ್ ಎಂಬುವವರು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು.
ತುಂಬು ಗರ್ಭಿಣಿ ಮೇಲೆಯೇ ನರರಾಕ್ಷಸನ ದೌರ್ಜನ್ಯ:
ಕಳೆದ ಒಂದು ವಾರದ ಹಿಂದೆ ಬಸಮ್ಮ ತುಂಬು ಗರ್ಭಿಣಿಯಾಗಿದ್ದಾಗ ಪತಿ ನಿಂಗರಾಜ್ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದಾಗಿ ಬಸಮ್ಮ ಅವರ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ತೀವ್ರ ಗಾಯಗೊಂಡಿದ್ದ ಆಕೆಯನ್ನು ತಕ್ಷಣವೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಕಳೆದ ೬ ದಿನಗಳ ಹಿಂದೆ ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ತಲೆಗೆ ಬಿದ್ದಿದ್ದ ಪೆಟ್ಟಿನಿಂದಾಗಿ ಆಕೆಯ ಆರೋಗ್ಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿತ್ತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ದಾವಣಗೆರೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರೆಫರ್ ಮಾಡಿದ್ದರು.
ನಡುರಸ್ತೆಯಲ್ಲೇ ಶವ ಬಿಟ್ಟು ಮಗುವಿನೊಂದಿಗೆ ಪತಿ ನಾಪತ್ತೆ!
ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಸಮ್ಮ ಅಂತಿಮ ಉಸಿರೆಳೆದಿದ್ದಾರೆ. ಆಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ಮೃತದೇಹದೊಂದಿಗೆ ಹಿಂತಿರುಗುತ್ತಿದ್ದ ಪತಿ ನಿಂಗರಾಜ್, ನಡು ದಾರಿಯಲ್ಲೇ ಹೆಂಡತಿಯ ಶವವನ್ನು ಬಿಟ್ಟು, ಹುಟ್ಟಿದ 6 ದಿನದ ಕಂದಮ್ಮನನ್ನು ಎತ್ತಿಕೊಂಡು ನಾಪತ್ತೆಯಾಗಿದ್ದಾನೆ.
ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು:
ಮೃತದೇಹವನ್ನು ದಾವಣಗೆರೆಯ ಇಂದಿರಾನಗರದಲ್ಲಿರುವ ಬಸಮ್ಮ ಅವರ ತಾಯಿ ಮನೆಗೆ ತರಲಾಗಿತ್ತು. ಪತಿ ನಿಂಗರಾಜ್ ಕೃತ್ಯದ ವಿರುದ್ಧ ಬಸಮ್ಮ ಅವರ ತಾಯಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು, ತಡರಾತ್ರಿ ಮನೆ ಮುಂಭಾಗದಲ್ಲಿದ್ದ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಸಂಬಂಧಿಕರ ತೀವ್ರ ಆಗ್ರಹದ ಮೇರೆಗೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದು, ಪರಾರಿಯಾಗಿರುವ ಆರೋಪಿ ಪತಿ ಹಾಗೂ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.





Leave a comment