ನವದೆಹಲಿ: ಶೋಭಾ ಡೆವಲಪರ್ಸ್ ಜೊತೆ 5 ಕೋಟಿ ಹೂಡಿಕೆ ಮಾಡಿ ಈಗ 2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ” ಎಂದು ಸಿಎಂ ಡಿ. ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ನವದೆಹಲಿಯಲ್ಲಿ ಮಾತನಾಡಿದ ಅವರು ಹೆಚ್ ಡಿ ಕುಮಾರಸ್ವಾಮಿ ಆರೋಪಗಳಿಗೆ ಸಖತ್ತಾಗಿಯೇ ತಿರುಗೇಟು ನೀಡಿದರು.
ಕದ್ದು ಏನನ್ನೂ ಮಾಡಿಕೊಂಡಿಲ್ಲ
“ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡೋ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ” ಎಂದರು.
“ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ” ಎಂದು ಲೇವಡಿ ಮಾಡಿದರು.
ವಿಧಾನಸಭೆಗೆ ಬಂದು ಚರ್ಚೆ ಮಾಡಲಿ
ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, “ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ? ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ” ಎಂದರು.





Leave a comment