ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೈಸ್ ಯೋಜನೆ ಹಾಗೂ ತಮ್ಮ ಮತ್ತು ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಮುಂದಿಟ್ಟುಕೊಂಡು ಮಾಡಿದ ಆರೋಪಗಳಿಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಗಂಭೀರ ತಿರುಗೇಟು ನೀಡಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಡಿ. ಕೆ. ಶಿವಕುಮಾರ್, “ನನ್ನ ಮತ್ತು ನನ್ನ ಕುಟುಂಬದ ಪ್ರತಿಯೊಂದು ಆಸ್ತಿ ಸಂಪಾದನೆಯ ವಿವರಗಳು ಆದಾಯ ತೆರಿಗೆ ಇಲಾಖೆಯಲ್ಲಿ ಪಾರದರ್ಶಕವಾಗಿ ಸಲ್ಲಿಕೆಯಾಗಿವೆ. ನಾನು ಕಾನೂನು ಚೌಕಟ್ಟಿನಲ್ಲೇ ಆಸ್ತಿ ಗಳಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ಡಿ. ಕೆ. ಶಿವಕುಮಾರ್ ನೀಡಿದ ಪ್ರಮುಖ ಹೇಳಿಕೆಗಳು:
ಕಾನೂನು ಚೌಕಟ್ಟಿನಲ್ಲಿ ಸಂಪಾದನೆ: “ನನ್ನ ಆಸ್ತಿಯ ಪ್ರತಿಯೊಂದು ಮಾಹಿತಿಯೂ ಐಟಿ ಇಲಾಖೆಯ ಬಳಿ ಇದೆ. ನಾವೇನು ಕಸ ಹೊಡೆದು ಸಂಪಾದಿಸಿದ ಹಣ ಇಟ್ಟುಕೊಂಡಿದ್ದೇವಾ? ನಾನು, ನನ್ನ ಕುಟುಂಬದವರು ಉದ್ಯಮ ನಡೆಸಿ ಆಸ್ತಿ ಮಾಡಬಾರದೇ?”
ಕುಮಾರಸ್ವಾಮಿ ಐಟಿ ಅಧಿಕಾರಿಯೇ?: “ಕುಮಾರಸ್ವಾಮಿ ಅವರು ತೀವ್ರ ಹತಾಶರಾಗಿದ್ದಾರೆ. ಪ್ರತಿಯೊಂದಕ್ಕೂ ಮಾಧ್ಯಮಗಳ ಮುಂದೆ ನಿಲ್ಲುವ ಅವರು ಐಟಿ ಅಧಿಕಾರಿಯೇ? ನಾನು ಯಾವುದೇ ಲಂಚ ಪಡೆದು ಸಿಕ್ಕಿಬಿದ್ದಿದ್ದೇನಾ ಅಥವಾ ಹಗರಣ ಎಸಗಿದ್ದೇನಾ?”
ವಿಧಾನಸಭೆಗೆ ಬಂದು ಚರ್ಚಿಸಲಿ: “ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲಾ ಡಿ. ಕೆ. ಶಿವಕುಮಾರ್ ಹೆದರುವುದಿಲ್ಲ. ಧೈರ್ಯವಿದ್ದರೆ ಮಾಧ್ಯಮಗಳ ಮುಂದೆ ಮಾತನಾಡುವ ಬದಲು ವಿಧಾನಸಭೆಗೆ ಬಂದು ನೇರ ಚರ್ಚೆ ಮಾಡಲಿ.”
ಕುಟುಂಬದ ರಾಜಕಾರಣದ ವೀಕ್ಷಣೆ: “ಸ್ವಂತ ಅಪ್ಪ ಹಾಗೂ ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ?” ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೈಸ್ ಯೋಜನೆಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ ಹಾಗೂ 2004 ರಿಂದ 2024 ರ ಅವಧಿಯಲ್ಲಿ ಡಿಕೆಶಿ ಕುಟುಂಬದ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನವದೆಹಲಿಯಲ್ಲಿರುವ ಡಿ. ಕೆ. ಶಿವಕುಮಾರ್ ಅವರು ನೀಡಿದ ಈ ಖಡಕ್ ಕೌಂಟರ್ ರಾಜ್ಯ ರಾಜಕೀಯದಲ್ಲಿ ಹೊಸ ಕಾವು ಸೃಷ್ಟಿಸಿದೆ.





Leave a comment