ಕೋಲ್ಕತ್ತಾ: ಧಾರ್ಮಿಕ ಚಟುವಟಿಕೆಗಳನ್ನು ಆಚರಿಸಲು ಅಥವಾ ಪ್ರಚಾರ ಮಾಡಲು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಹೇಳಿದ್ದಾರೆ.
ಕೋಲ್ಕತ್ತಾದ ನೇತಾಜಿ ಇಂದೋರ್ ಸ್ಟೇಡಿಯಂನಲ್ಲಿ ‘ಬಂಗೂರ್ ಜಾಗರಣ ಮಂಚ’ ಆಯೋಜಿಸಿದ್ದ ಬೃಹತ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ (‘ಮೌಸಮ್ ಬದಲ್ ಗಯಾ ಹೈ’). ಗೀತೆ ಮತ್ತು ಹನುಮಾನ್ ಚಾಲೀಸಾವನ್ನು ಯಾವುದೇ ಹಿಂಜರಿಕೆಯಿಲ್ಲದೆ ಹಂಚಿ. ಹರೇ ಕೃಷ್ಣ ಮಂತ್ರವನ್ನು ಜಪಿಸಿ, ಶಂಖಗಳನ್ನು ಊದಿ. ಧರ್ಮದ ಹಾದಿಯಲ್ಲಿ ನಡೆಯಲು ಈಗ ಯಾವುದೇ ಭಯವಿಲ್ಲ. ಟೀಕಾ, ಶಿಖಾ, ಧೋತಿ, ತುಳಸಿಯ ಗೌರವಿಸುವ ಸರ್ಕಾರ ಬಂದಿದೆ. ಗೋಮಾತೆಯನ್ನು ರಕ್ಷಿಸುವ ಸರ್ಕಾರ ಇಲ್ಲಿದೆ,” ಎಂದು ಅವರು ತಮ್ಮ ಭಾಷಣದಲ್ಲಿ ಘೋಷಿಸಿದರು.
ಸಾಧು-ಸಂತರ ನಿಂದನೆಗೆ ಜೈಲು ಶಿಕ್ಷೆ:
ಇತ್ತೀಚೆಗೆ ಮಧ್ಯಪ್ರದೇಶದ ಖ್ಯಾತ ಧಾರ್ಮಿಕ ವಕ್ತಾ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಗೇಶ್ವರ ಧಾಮ್) ಬಂಗಾಳಕ್ಕೆ ಆಗಮಿಸಿದ್ದಾಗ ಕೆಲವು ಕಿಡಿಗೇಡಿಗಳು ಅವರ ಪೋಸ್ಟರ್ ಹಾಗೂ ಉರುಪುಗಳನ್ನು ಸುಟ್ಟು ವಿರೋಧ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಉಲ್ಲೇಖಿಸಿದ ಸಿಎಂ ಅಧಿಕಾರಿ, “ಸಾಧು, ಸಂತರು ಮತ್ತು ಮಹಂತರಿಗೆ ಅವಮಾನ ಮಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಅವರನ್ನು ಜೈಲಿಗೆ ಕಳುಹಿಸಲಾಗುವುದು. ಇಂತಹ ಕೃತ್ಯ ಎಸಗಿದವರ ವಿರುದ್ಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ,” ಎಂದು ವಿಧಾನಸಭೆಯಲ್ಲಿ ನೀಡಿದ್ದ ಎಚ್ಚರಿಕೆಯನ್ನು ಪುನರುಚ್ಚರಿಸಿದರು.
ವಿಪಕ್ಷಗಳ ವಿರುದ್ಧ ವಾಗ್ದಾಳಿ:
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಹೇಳಿಕೆಗಳನ್ನು ವೀಕ್ಷಿಸಿದ ಅವರು, “ದೇಶಕ್ಕೆ 1947 ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರವಿರೋಧಿ ಅಥವಾ ಒಡೆಯುವ ಮಾತುಗಳನ್ನಾಡುವ ‘ತುಕ್ಡೆ ತುಕ್ಡೆ ಗ್ಯಾಂಗ್’ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ರಾಷ್ಟ್ರಪ್ರೇಮಿಗಳು ಸೂಕ್ತ ಪಾಠ ಕಲಿಸಲಿದ್ದಾರೆ,” ಎಂದು ಟೀಕಿಸಿದರು.
ಮುಂಬರುವ ಧಾರ್ಮಿಕ ಸಮಾವೇಶಗಳು:
ಬಂಗಾಳದಲ್ಲಿ ಸನಾತನ ಧರ್ಮದ ಜಾಗೃತಿ ಹೆಚ್ಚುತ್ತಿದ್ದು, ಕಳೆದ ವರ್ಷ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ 1 ಲಕ್ಷ ಜನ ಹಾಗೂ ಸಿಲಿಗುರಿಯಲ್ಲಿ 50,000 ಜನರು ಭಗವದ್ಗೀತೆ ಪಠಣ ಮಾಡಿದ್ದರು. ಮುಂಬರುವ ಡಿಸೆಂಬರ್ 29 ರಂದು 10 ಲಕ್ಷ ಜನರ ಸಮ್ಮುಖದಲ್ಲಿ ಬೃಹತ್ ಗೀತಾ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, RSS ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ. ಜೊತೆಗೆ ಮಕರ ಸಂಕ್ರಾಂತಿಯ ವೇಳೆಗೆ ಜಗದ್ಗುರು ರಾಮಭದ್ರಾಚಾರ್ಯ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಧಾರ್ಮಿಕ ಸಮಾವೇಶ ನಡೆಯಲಿದೆ ಎಂದು ಸಿಎಂ ಮಾಹಿತಿ ನೀಡಿದರು.





Leave a comment