ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-75ರ (NH-75) ಊಪ್ಪಿನಹಳ್ಳಿ ಗೇಟ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಟ್ಯಾಂಕರ್‌ಗೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುದ್ದನಹಳ್ಳಿ ಗ್ರಾಮದ ನಿವಾಸಿ ಎಂ.ಎನ್. ಉಮೇಶ್ (32) ಮೃತಪಟ್ಟ ದುರ್ದೈವಿ. ಅವರ ಪತ್ನಿ ರಚನಾ (28) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆಯ ವಿವರ:
ಉಮೇಶ್ ಹಾಗೂ ರಚನಾ ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ (KA-13-ER-8323) ಮುದ್ದನಹಳ್ಳಿಯಿಂದ ಚನ್ನರಾಯಪಟ್ಟಣದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೆಂಗಳೂರು ಮಾರ್ಗವಾಗಿ ಸಾಗುತ್ತಿದ್ದ ಟ್ಯಾಂಕರ್ ಚಾಲಕ ಏಕಾಏಕಿ ವಾಹನವನ್ನು ಎಡಕ್ಕೆ ಚಲಾಯಿಸಿದ್ದಾನೆ. ಪರಿಣಾಮ, ನಿಯಂತ್ರಣ ತಪ್ಪಿದ ಬೈಕ್ ಟ್ಯಾಂಕರ್‌ನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ತಲೆಗೆ ತೀವ್ರ ಪೆಟ್ಟುಬಿದ್ದು ಉಮೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡ ರಚನಾ ಅವರನ್ನು ತಕ್ಷಣವೇ ಸ್ಥಳೀಯರು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸ್ ಭೇಟಿ, ಪ್ರಕರಣ ದಾಖಲು:
ವಿಷಯ ತಿಳಿದ ತಕ್ಷಣವೇ ಚನ್ನರಾಯಪಟ್ಟಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಂಚಾರಿ ಜಾಗೃತಿ: ರಸ್ತೆಯಲ್ಲಿ ಚಾಲನೆ ಮಾಡುವಾಗ ವಹಿಸುವ ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬದ ಬದುಕನ್ನೇ ಬಲಿ ಪಡೆಯಬಹುದು. ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರುವುದು ಅತ್ಯಗತ್ಯ.





Leave a comment