ಏಕತಾ ನಗರ (ಗುಜರಾತ್): ಭಾರತೀಯ ಚಿತ್ರರಂಗದ ಅತ್ಯುನ್ನತ ಹಾಗೂ ಅತ್ಯಂತ ಗೌರವಾನ್ವಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ, ಹಿರಿಯ ನಟ ಅನಂತ್ ನಾಗ್ ಅವರು ತಮ್ಮ ಐದು ದಶಕಗಳ ಸುದೀರ್ಘ ನಟನಾ ಪಯಣವನ್ನು ಮೆಲುಕು ಹಾಕುತ್ತಾ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.
ಗುಜರಾತ್ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರತಿಷ್ಠಿತ ಪುರಸ್ಕಾರವನ್ನು ಸ್ವೀಕರಿಸಿದ ಅವರು, ತಮ್ಮ ಬದುಕಿನ ತಿರುವುಗಳನ್ನು ಹಾಗೂ ರಂಗಭೂಮಿಯಿಂದ ಸಿನಿಮಾರಂಗದವರೆಗಿನ ಯಶೋಗಾಥೆಯನ್ನು ಹಂಚಿಕೊಂಡರು.
ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ನಟ ಅನಂತ್ ನಾಗ್, “ನನ್ನ ಜೀವನದ ಮೊದಲ 12–13 ವರ್ಷಗಳನ್ನು ನಾನು ಆಶ್ರಮ, ಮಠದಲ್ಲಿ ಕಳೆದೆ. ಅಲ್ಲಿ ನನ್ನ ಬಾಲ್ಯ ರೂಪುಗೊಂಡಿತು. ಆ ಸಮಯದಲ್ಲಿ ನಮಗೆ ಪಠಣ ಮಾಡಲಾಗುತ್ತಿದ್ದ ‘ಉದರನಿಮಿತ್ತಂ ಬಹುಕೃತ ವೇಷಂ’ ಎಂಬ ಶ್ಲೋಕದ ಸಾಲು ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಟ್ಟಿತ್ತು. ಅಂದರೆ ಹೊಟ್ಟೆಪಾಡಿಗಾಗಿ ಮನುಷ್ಯ ಹಲವು ವೇಷಗಳನ್ನು ಧರಿಸಬೇಕಾಗುತ್ತದೆ. ಅದೇ ರೀತಿ ಬದುಕಿನ ನಿರ್ವಹಣೆಗಾಗಿ, ಹೊಟ್ಟೆಪಾಡಿಗಾಗಿ ನಾನು ಆರಂಭಿಸಿದ ಈ ನಟನಾ ವೃತ್ತಿಯೇ ಮುಂದೆ ನನ್ನ ಇಡೀ ಬದುಕಾಯಿತು” ಎಂದು ಮಾರ್ಮಿಕವಾಗಿ ಹೇಳಿದರು.
ಮಠದ ವಾತಾವರಣದಿಂದ ಹೊರಬಂದ ಬಳಿಕ ಮುಂಬೈಗೆ ತೆರಳಿದ ಅನಂತ್ ನಾಗ್ ಅವರಿಗೆ ರಂಗಭೂಮಿಯ ಬಾಗಿಲು ತೆರೆಯಿತು. ‘ಚೈತನ್ಯ ಮಹಾಪ್ರಭು’ ಕುರಿತ ನಾಟಕದ ಮೂಲಕ ರಂಗಪ್ರವೇಶ ಮಾಡಿದ ಅವರು, ಮುಂಬೈನ ಸುಮಾರು 5 ವರ್ಷಗಳ ಅವಧಿಯಲ್ಲಿ ವಿವಿಧ ಭಾಷೆಗಳ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದರು. ಈ ರಂಗಭೂಮಿಯ ಅಭ್ಯಾಸವೇ ಅವರಿಗೆ ಅಭಿನಯದ ನಿಜವಾದ ತರಬೇತಿ ಶಾಲೆಯಾಯಿತು.
ಅದರ ನಂತರ ಶ್ಯಾಮ್ ಬೆನಗಲ್, ಎಂ.ಎಸ್. ಸತ್ಯು ಹಾಗೂ ಗಿರೀಶ್ ಕಾರ್ನಾಡ್ ಅವರಂತಹ ದಿಗ್ದರ್ಶಕರ ನಿಕಟವರ್ತಿಯಾಗಿ ಹೊಸ ಅಲೆಯ ಆರ್ಟ್ ಸಿನಿಮಾಗಳ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ಅಂಕುರ್’, ‘ಮಂಥನ್’, ‘ಭೂಮಿಕಾ’ ಮತ್ತು ‘ಸಂಕಲ್ಪ’ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದರು. ಆದರೆ, ಕರ್ನಾಟಕದಲ್ಲಿ ಹೊಸ ಅಲೆಯ ಹಾಗೂ ಸದಭಿರುಚಿಯ ಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶಗಳು ಸಿಗತೊಡಗಿದಾಗ, ಅವರು ಸಂಪೂರ್ಣವಾಗಿ ತವರಿಗೆ ಮರಳಿದರು.
ಸಿನಿಪಯಣದ ಸಾರ್ಥಕತೆಯನ್ನು ವ್ಯಕ್ತಪಡಿಸುತ್ತಾ ಅವರು, “ಕರ್ನಾಟಕದ ಪ್ರೇಕ್ಷಕರು ಅತ್ಯಂತ ಪ್ರಬುದ್ಧರು. ಭಾರತ ನನ್ನ ಜನ್ಮಭೂಮಿಯಾದರೆ, ಕರ್ನಾಟಕವೇ ನನ್ನ ಕರ್ಮಭೂಮಿ ಮತ್ತು ಧರ್ಮಭೂಮಿಯಾಯಿತು. ಈ ಪ್ರಶಸ್ತಿ ಕೇವಲ ನನ್ನೊಬ್ಬನದಲ್ಲ; ನನ್ನೊಂದಿಗೆ ಕೆಲಸ ಮಾಡಿದ ನಿರ್ದೇಶಕರು, ನಿರ್ಮಾಪಕರು ಹಾಗೂ ದಶಕಗಳಿಂದ ನನ್ನ ಪಾತ್ರಗಳನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ ಕೋಟ್ಯಂತರ ಪ್ರೇಕ್ಷಕರಿಗೆ ಸಲ್ಲಬೇಕು” ಎಂದು ಶ್ರದ್ಧೆಯಿಂದ ನಮಿಸಿದರು.





Leave a comment