ದಾವಣಗೆರೆ: ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುವ ಪ್ರಕ್ರಿಯೆಯು ಕೇಂದ್ರ ಸರ್ಕಾರದ ನಿಯಮಾವಳಿಗಳು ಹಾಗೂ ವೈಜ್ಞಾನಿಕ ಮಾನದಂಡಗಳಿಗೆ ಒಳಪಟ್ಟು ನಡೆಯುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಉಪಗ್ರಹಚಿತ್ರಗಳು, ಮಳೆ ಕೊರತೆ, ಮಣ್ಣಿನ ತೇವಾಂಶ ಹಾಗೂ ಬೆಳೆ ಹಾನಿ ಸೇರಿದಂತೆ ಒಟ್ಟು 10 ಪ್ರಮುಖ ಮಾನದಂಡಗಳ ಆಧಾರದ ಮೇಲೆ ಬರಪೀಡಿತ ಪ್ರದೇಶಗಳನ್ನು ಆಯ್ದುಕೊಳ್ಳಲಾಗುತ್ತದೆ. ಒಂದೇ ಬಾರಿಗೆ ರಾಜ್ಯದ ಎಲ್ಲಾ 224 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಅರ್ಹತೆ ಹೊಂದುವ ತಾಲೂಕುಗಳನ್ನು ಹಂತ-ಹಂತವಾಗಿ ಸೇರ್ಪಡೆ ಮಾಡಲಾಗುವುದು” ಎಂದು ಸ್ಪಷ್ಟಪಡಿಸಿದರು.
ಮುಂಗಾರು ಋತುವಿನ ಕೊನೆಯವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದ್ದು, ಈಗಾಗಲೇ ಎರಡು ಹಂತಗಳಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನು 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಗಳೂರು ತಾಲೂಕಿಗೂ ಬರಪೀಡಿತ ಟ್ಯಾಗ್:
ಜಗಳೂರು ತಾಲೂಕಿನ ಜನತೆ ಆತಂಕ ಪಡುವ ಅಗತ್ಯವಿಲ್ಲ. “ನಮ್ಮ ತಾಲೂಕನ್ನು ಬಿಟ್ಟುಬಿಡಲಾಗಿದೆ ಎಂಬ ಗೊಂದಲ ಬೇಡ. ವೈಜ್ಞಾನಿಕ ಸಮೀಕ್ಷೆ (Ground-Truthing) ಮುಗಿದ ತಕ್ಷಣ ಜಗಳೂರು ತಾಲೂಕನ್ನು ಸಹ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು” ಎಂದು ಸಚಿವರು ಭರವಸೆ ನೀಡಿದರು.





Leave a comment