ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ ಮತ್ತು ಸಮಸ್ಯೆಗಳನ್ನು ಬೆಳಕಿಗೆ ತರಲು ಹಾಗೂ ಅವುಗಳನ್ನು ಬಗೆಹರಿಸಲು ಕರ್ನಾಟಕ ಕಾಂಗ್ರೆಸ್ ವಕ್ತಾರ ಧ್ರುವ್ ಜತ್ತಿ ಅವರು ‘ನಮ್ಮ ಶಾಲೆ’ (NammaShale) ಎಂಬ ನೂತನ ಡಿಜಿಟಲ್ ಪ್ಲಾಟ್‌ಫಾರ್ಮ್ ಆರಂಭಿಸಿದ್ದಾರೆ.
ಈ ವೇದಿಕೆಯ ಮೂಲಕ ನಾಗರಿಕರು ಶಾಲೆಯ ಶೌಚಾಲಯ, ಕುಡಿಯುವ ನೀರು, ವಿದ್ಯುತ್, ತರಗತಿ ಕೊಠಡಿಗಳು, ಪೀಠೋಪಕರಣಗಳು ಮತ್ತು ಕಾಂಪೌಂಡ್ ಗೋಡೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವರದಿ ಮಾಡಬಹುದು. ವೇದಿಕೆ ಆರಂಭವಾದಾಗಿನಿಂದ ಈವರೆಗೆ ರಾಜ್ಯದ 26 ಜಿಲ್ಲೆಗಳಿಂದ ಒಟ್ಟು 607 ದೂರುಗಳು ಸಲ್ಲಿಕೆಯಾಗಿವೆ.
ಸದ್ಯ ಸ್ವೀಕರಿಸಲಾದ ದೂರುಗಳ ಪೈಕಿ 120 ದೂರುಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಅಲ್ಲದೆ, ತಕ್ಷಣದ ಗಮನ ಮತ್ತು ದುರಸ್ತಿ ಅಗತ್ಯವಿರುವ 50 ಶಾಲೆಗಳನ್ನು ಈ ವೇದಿಕೆ ಗುರುತಿಸಿದೆ.
ಕಾರ್ಯನಿರ್ವಹಣೆ ಮತ್ತು ಪರಿಹಾರ ಮಾದರಿ ಹೇಗೆ?
‘ನಮ್ಮ ಶಾಲೆ’ ಮಾದರಿಯ ಅಡಿ, ವರದಿಯಾದ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಒಂದು ವೇಳೆ 30 ದಿನಗಳೊಳಗೆ ಇಲಾಖೆಯಿಂದ ಸಮಸ್ಯೆ ಬಗೆಹರಿಯದಿದ್ದರೆ, ಸಿಎಸ್ಆರ್ (CSR) ನಿಧಿ, ಎನ್‌ಜಿಒ ಮತ್ತು ಸ್ಥಳೀಯ ಸಮುದಾಯದ ಬೆಂಬಲದ ಮೂಲಕ ಆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ವೇದಿಕೆ ಮುಂದಾಗಲಿದೆ.
ತಮ್ಮದೇ ಪಕ್ಷದ ಸರ್ಕಾರವಿದ್ದರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಈ ಉಪಕ್ರಮ ಕೈಗೊಂಡಿರುವ ಧ್ರುವ್ ಜತ್ತಿ, ಸರ್ಕಾರಿ ವ್ಯವಸ್ಥೆಯೊಂದಿಗೆ ಕೆಲಸ ಮಾಡಲು ಸುಲಭವಾಗುವಂತೆ ಈ ವೇದಿಕೆಯ ತಂತ್ರಜ್ಞಾನ ಮತ್ತು ಡ್ಯಾಶ್‌ಬೋರ್ಡ್ ಅನ್ನು ಕರ್ನಾಟಕ ಸರ್ಕಾರಕ್ಕೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ.





Leave a comment