ಸತ್ನಾ, ಮಧ್ಯಪ್ರದೇಶ: ಸ್ನೇಹ ಮತ್ತು ನಂಬಿಕೆಗೆ ಕಪ್ಪುಚುಕ್ಕೆ ತರುವಂತಹ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತೆಯ ಪ್ರಿಯಕರನೊಂದಿಗೆ ಶಾರೀರಿಕ ಸಂಬಂಧವಿಟ್ಟುಕೊಳ್ಳಲು ನಿರಾಕರಿಸಿದ್ದಕ್ಕೆ, ಆಕೆಯ ಮೇಲೆ ನಾಲ್ವರು ಯುವತಿಯರು ಸೇರಿ ಕ್ರೂರವಾಗಿ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ:
ಬಾಧಿತ ವಿದ್ಯಾರ್ಥಿನಿಗೆ ಅದೇ ಪ್ರದೇಶದ ಯುವಕನೊಬ್ಬ ವಾಟ್ಸಾಪ್ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ವಿದ್ಯಾರ್ಥಿನಿ ಆತನ ಲೈಂಗಿಕ ಕಿರುಕುಳವನ್ನು ತೀವ್ರವಾಗಿ ವಿರೋಧಿಸಿದ್ದಳು. ಆದರೆ, ಆಕೆಯ ಕಾಲೇಜು ಸ್ನೇಹಿತೆಯೇ ಯುವಕನ ಪರವಾಗಿ ನಿಂತು, ಆತನ ಬೇಡಿಕೆಗೆ ಒಪ್ಪುವಂತೆ ಸಂತ್ರಸ್ತೆಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದಳು.
ಅರಣ್ಯ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ:
ವಿದ್ಯಾರ್ಥಿನಿ ಈ ಅಸಭ್ಯ ಪ್ರಸ್ತಾಪಕ್ಕೆ ಸಂಪೂರ್ಣವಾಗಿ ಒಪ್ಪದಿದ್ದಾಗ, ಆರೋಪಿ ಸ್ನೇಹಿತೆ ಮಾರುಕಟ್ಟೆಗೆ ಹೋಗುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಸ್ಕೂಟಿಯಲ್ಲಿ ನಗರ ವನ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾಳೆ. ಅಲ್ಲಿ ಮುಖ ಮುಚ್ಚಿಕೊಂಡಿದ್ದ ಇತರ ಮೂವರು ಯುವತಿಯರೊಂದಿಗೆ ಸೇರಿಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಸಭ್ಯ ಪದಗಳಿಂದ ನಿಂದಿಸಿ, ಲಾಠಿ ಮತ್ತು ಕಾಲುಗಳಿಂದ ಬಾರಿಸಿ ಕ್ರೌರ್ಯ ಮೆರೆದಿದ್ದಾರೆ.
ವಿಡಿಯೋ ಚಿತ್ರೀಕರಣ ಮತ್ತು ಪೊಲೀಸರ ಕ್ರಮ:
ಈ ಸಂಪೂರ್ಣ ಅಮಾನವೀಯ ಕೃತ್ಯವನ್ನು ವಿಡಿಯೋ ಮಾಡಿಕೊಂಡ ಆರೋಪಿಗಳು, ಸಂತ್ರಸ್ತೆಯಿಂದ ಬಲವಂತವಾಗಿ ಯುವಕನಿಗೆ ವೀಡಿಯೋ ಕಾಲ್ ಮೂಲಕ ಕ್ಷಮೆ ಕೇಳಿಸಿದ್ದಾರೆ. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಘಟನೆಯಿಂದ ಭಯಭೀತಳಾಗಿದ್ದ ವಿದ್ಯಾರ್ಥಿನಿ ಆರಂಭದಲ್ಲಿ ಸುಮ್ಮನಿದ್ದರೂ, ವಿಡಿಯೋ ವೈರಲ್ ಆದ ನಂತರ ಕುಟುಂಬಸ್ಥರೊಂದಿಗೆ ಕೋಲ್ಗವಾನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಡಿಯೋ ಆಧರಿಸಿ ಆರೋಪಿ ಯುವತಿಯರ ಪತ್ತೆಗೆ ಜಾಲ ಬೀಸಿದ್ದಾರೆ.





Leave a comment