ಚಂಗನಾಶ್ಶೇರಿ / ತಿರುವನಂತಪುರಂ: ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಂದಾಗಿರುವ ಕುರಿತು ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೇರಳದ ಹಿರಿಯ ಸಿಪಿಐ(ಎಂ) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂಗನಾಶ್ಶೇರಿ ಮಾರ್ಗ ಮಧ್ಯೆ ಚೆಂಗಳನೂರ್ ವಿಶ್ರಾಂತಿ ಗೃಹಕ್ಕೆ (Rest House) ಬಂದಿಳಿದ ಪಿಣರಾಯಿ ವಿಜಯನ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಇಡಿ ತನಿಖೆ ಕುರಿತು ಪ್ರಶ್ನಿಸಿದರು. ಈ ವೇಳೆ ತೀವ್ರ ಕುಪಿತಗೊಂಡ ಅವರು, ಬಾತ್‌ರೂಮ್‌ಗೆ ಹೋಗುವ ಮಾರ್ಗದಲ್ಲೂ ಪ್ರಶ್ನೆ ಕೇಳುತ್ತಿದ್ದ ವರದಿಗಾರರನ್ನು ತಡೆದು, “ಹೊರಗೆ ನಿಲ್ಲಿ, ನೀವು ನನ್ನ ಜೊತೆ ಬಾತ್‌ರೂಮ್‌ಗೂ ಬರ್ತೀರಾ?” ಎಂದು ಕಿಡಿಕಾರಿದರು.
ನಂತರ ಶೌಚಾಲಯದಿಂದ ಹೊರಬಂದ ಮೇಲೆಯೂ ತಮ್ಮ ಕೋಪವನ್ನು ನಿಯಂತ್ರಿಸಲಾಗದೆ, “ನಾನು ಇಲ್ಲಿಗೆ ಬಂದಿದ್ದು ಮೂತ್ರ ವಿಸರ್ಜನೆ ಮಾಡಲು, ನಿಮ್ಮನ್ನು ನೋಡಲಲ್ಲ” ಎಂದು ಖಾರವಾಗಿ ಉತ್ತರಿಸಿ ಅಲ್ಲಿಂದ ತೆರಳಿದರು.
ಘಟನೆಯ ಹಿನ್ನೆಲೆ:
ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (CMRL) ಕಂಪನಿಯಿಂದ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಸಂಸ್ಥೆಗೆ ಯಾವುದೇ ಸೇವೆ ನೀಡದೆ 2.78 ಕೋಟಿ ರೂ. ಅಕ್ರಮ ಹಣ ರವಾನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಹಾಗೂ ಅಳಿಯ ಪಿ. ಎ. ಮೊಹಮ್ಮದ್ ರಿಯಾಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ಇಡಿ ಈಗಾಗಲೇ ಕೇರಳ ಡಿಜಿಪಿಗೆ ಪತ್ರ ಬರೆದಿದೆ.
ಈ ಕ್ರಮವನ್ನು ‘ರಾಜಕೀಯ ಪ್ರೇರಿತ ಪಿತೂರಿ’ ಹಾಗೂ ‘ದ್ವೇಷದ ರಾಜಕಾರಣ’ ಎಂದು ಕರೆದಿರುವ ಪಿಣರಾಯಿ ವಿಜಯನ್, ಸಿಪಿಐ(ಎಂ) ಪಕ್ಷವನ್ನು ಮತ್ತು ಕೇರಳದ ಸಹಕಾರಿ ಕ್ಷೇತ್ರವನ್ನು ಮುಗಿಸಲು ಕೇಂದ್ರ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.





Leave a comment