ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಮಂತ್ರಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 7,000 ಕಶ್ಮೀರಿ ಪಂಡಿತ ಉದ್ಯೋಗಿಗಳಿಗೆ ಉಗ್ರ ಸಂಘಟನೆಗಳಿಂದ ತೀವ್ರ ಜೀವ ಬೆದರಿಕೆ ಎದುರಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಸಂಘಟನೆಯ ಉಪಸಂಸ್ಥೆಯೆಂದು ಶಂಕಿಸಲಾದ ‘ಯುನೈಟೆಡ್ ಲಿಬರೇಶನ್ ಕೌನ್ಸಿಲ್’ (ULC) ಉಗ್ರ ಸಂಘಟನೆಯು ಹೊಸ ಬೆದರಿಕೆ ಪತ್ರಗಳನ್ನು ಬಿಡುಗಡೆ ಮಾಡಿದೆ.
ಉದ್ಯೋಗಿಗಳು ತಕ್ಷಣವೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಡಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಈ ಪತ್ರಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ಉದ್ಯೋಗಿಗಳ ಖಾಸಗಿ ಮೊಬೈಲ್ ಸಂಖ್ಯೆಗಳು, ಮನೆಯ ವಿಳಾಸಗಳು ಮತ್ತು ವಾಹನಗಳ ನಂಬರ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗಿರುವುದು ಕಣಿವೆ ರಾಜ್ಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಮಾಹಿತಿ ಸೋರಿಕೆ ಬಗ್ಗೆ ತೀವ್ರ ಕಳವಳ:
ಉಗ್ರರ ಕೈಗೆ ನೌಕರರ ನಿಖರವಾದ ವೈಯಕ್ತಿಕ ವಿವರಗಳು ಹೇಗೆ ಸಿಕ್ಕವು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಭದ್ರತಾ ವೈಫಲ್ಯವೇ ಅಥವಾ ಒಳಸಂಚೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಶ್ಮೀರಿ ಪಂಡಿತ ಸಂಘಟನೆಗಳು ಕೇಂದ್ರ ಗೃಹ ಸಚಿವಾಲಯ ಹಾಗೂ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ (LG) ಆಡಳಿತವನ್ನು ಒತ್ತಾಯಿಸಿವೆ. ಉಗ್ರರ ಈ ಬೆದರಿಕೆಯಿಂದಾಗಿ ಕಣಿವೆಯಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ನೌಕರರು ಮತ್ತು ಅವರ ಕುಟುಂಬಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.





Leave a comment