Home ದಾವಣಗೆರೆ ಬಿಸಿ ಬಿಸಿ ಲಾಠಿನ ಏಟು: ಲಿವ್-ಇನ್ ಸಂಗಾತಿ ಭೀಕರವಾಗಿ ಕೊಂದ ಆರೋಪಿಗೆ ಸ್ಥಳ ಮಹಜರು ವೇಳೆ ಪೊಲೀಸರಿಂದ ಬಸ್ ಸ್ಟ್ಯಾಂಡ್‌ನಲ್ಲೇ ಹಿಗ್ಗಾಮುಗ್ಗಾ ಥಳಿತ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬಿಸಿ ಬಿಸಿ ಲಾಠಿನ ಏಟು: ಲಿವ್-ಇನ್ ಸಂಗಾತಿ ಭೀಕರವಾಗಿ ಕೊಂದ ಆರೋಪಿಗೆ ಸ್ಥಳ ಮಹಜರು ವೇಳೆ ಪೊಲೀಸರಿಂದ ಬಸ್ ಸ್ಟ್ಯಾಂಡ್‌ನಲ್ಲೇ ಹಿಗ್ಗಾಮುಗ್ಗಾ ಥಳಿತ!

Share
ಮಹಜರು
Share

ಭಾವನಗರ (ಗುಜರಾತ್): ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆಯನ್ನು ಸಾರ್ವಜನಿಕವಾಗಿ ಬಸ್ ಸ್ಟ್ಯಾಂಡ್‌ನಲ್ಲಿ ಹೊಡೆದು ಕೊಂದ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆತಂದ ಪೊಲೀಸರು, ಸ್ಥಳ ಮಹಜರು ನಡೆಸುವ ವೇಳೆ ಆತನಿಗೆ ಸಾರ್ವಜನಿಕರ ಎದುರಲ್ಲೇ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ.

ಘಟನೆಯ ವಿವರ:

ಸೆಪ್ಟೆಂಬರ್ 3 ರಂದು ಭಾವನಗರದ ಎಸ್‌ಟಿ ಬಸ್ ಸ್ಟ್ಯಾಂಡ್‌ನಲ್ಲಿ 20 ವರ್ಷದ ಫೈಸಲ್ ಅಲಿಯಾಸ್ ಖಟ್ಕಿ ಲಖಾನಿ ಹಾಗೂ ಆತನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ 40 ವರ್ಷದ ಕಾಜಲ್‌ಬೆನ್ ಬಾರೈಯಾ ನಡುವೆ ತೀವ್ರ ಜಗಳ ನಡೆದಿತ್ತು.

ಕಾಜಲ್‌ಬೆನ್ ಅವರಿಗೆ ಬೇರೊಬ್ಬ ವ್ಯಕ್ತಿ ರವಿ ಗೋಹಿಲ್ ಜೊತೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಫೈಸಲ್, ಬಸ್ ನಿಲ್ದಾಣದಲ್ಲೇ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದನು. ಕಾಜಲ್‌ಬೆನ್ ಅವರನ್ನು ನೆಲಕ್ಕೆ ಅಪ್ಪಳಿಸಿ, ತಲೆ, ಕುತ್ತಿಗೆ ಮತ್ತು ಎದೆಗೆ ಭೀಕರವಾಗಿ ಒದ್ದಿದ್ದನು. ಇದನ್ನು ತಡೆಯಲು ಬಂದ ರವಿ ಎಂಬಾತನ ಮೇಲೆಯೂ ಫೈಸಲ್ ದಾಳಿ ನಡೆಸಿದ್ದನು.

ಸಾರ್ವಜನಿಕರು ನೋಡುತ್ತಿದ್ದಂತೆಯೇ ಸುಮಾರು 7 ನಿಮಿಷಗಳ ಕಾಲ ಈ ಭೀಕರ ಹಲ್ಲೆ ನಡೆದಿದ್ದು, ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿತ್ತು. ತೀವ್ರವಾಗಿ ಗಾಯಗೊಂಡ ಕಾಜಲ್‌ಬೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 4 ರಂದು ಅವರು ಮೃತಪಟ್ಟರು.

ಸ್ಥಳ ಮಹಜರು ವೇಳೆ ಪೊಲೀಸರ ಆಕ್ರೋಶ:

ಮೃತಳ ತಾಯಿಯ ದೂರಿನನ್ವಯ ನೀಲಂಬಾಗ್ ಪೊಲೀಸ್ ಠಾಣೆಯ ಸಿಬ್ಬಂದಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಫೈಸಲ್‌ನನ್ನು ಬಂಧಿಸಿದರು. ನಂತರ ಅಪರಾಧ ನಡೆದ ಸನ್ನಿವೇಶವನ್ನು ಮರುಸೃಷ್ಟಿಸಲು  ಆರೋಪಿಯನ್ನು ಅದೇ ಬಸ್ ಸ್ಟ್ಯಾಂಡ್‌ಗೆ ಕರೆತಂದರು. ಈ ವೇಳೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಸಾರ್ವಜನಿಕರ ಸಮ್ಮುಖದಲ್ಲೇ ಆರೋಪಿಗೆ ಲಾಠಿ ಬೀಸಿ ತಕ್ಕ ಪಾಠ ಕಲಿಸಿದರು.

ಲಾಠಿಚಾರ್ಜ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸರ ಈ ತತ್‌ಕ್ಷಣದ ಕ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರೋಪಿ ಫೈಸಲ್ ವಿರುದ್ಧ ಈ ಹಿಂದೆ ಕಳ್ಳತನ ಮತ್ತು ಹಲ್ಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles