ತಿರುವನಂತಪುರಂ/ಕೊಚ್ಚಿ (ಸಪ್ಟೆಂಬರ್ 5, 2026): ಆಹಾರ ದರ ಹಾಗೂ ಮನಸೋಇಚ್ಛೆ ಹೇರಲಾಗುತ್ತಿರುವ ಟಿಕೆಟ್ ದರಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಕೇರಳ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಲೀಗಲ್ ಮೆಟ್ರಾಲಜಿ ಇಲಾಖೆ , ಆಹಾರ ಸುರಕ್ಷತೆ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಮಾಲ್‌ನಲ್ಲಿರುವ ಪ್ರಮುಖ ಥಿಯೇಟರ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ಆರಂಭಿಸಿವೆ.
ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸಲಾದ ಬೆಲೆ ಪಟ್ಟಿಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಹಾಗೂ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಆಹಾರ ನೀಡಿ ಗ್ರಾಹಕರನ್ನು ಶೋಷಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೊಚ್ಚಿ, ತಿರುವನಂತಪುರಂ ಸೇರಿದಂತೆ ರಾಜ್ಯಾದ್ಯಂತ ಈ ಸರಣಿ ತಪಾಸಣೆಗಳನ್ನು ಕೈಗೊಳ್ಳಲಾಗಿದೆ.
₹250 ಟಿಕೆಟ್‌ಗೆ ₹500 ಪಾಪ್‌ಕಾರ್ನ್: ತಿರುವನಂತಪುರಂ ಮೇಯರ್ ವಿ.ವಿ. ರಾಜೇಶ್ ಅವರು ಮಾತನಾಡಿ, ಪ್ರಮುಖ ಚಲನಚಿತ್ರ ನಿರ್ಮಾಪಕರೊಬ್ಬರು ₹250 ಟಿಕೆಟ್ ಖರೀದಿಸಿ ಒಳಹೋದರೆ, ₹498 ಕೊಟ್ಟು ಪಾಪ್‌ಕಾರ್ನ್ ಖರೀದಿಸಬೇಕಾದ ವಿಚಿತ್ರ ಪರಿಸ್ಥಿತಿ ಬಂದೊದಗಿದೆ ಎಂದು ಕಿಡಿಕಾರಿದ್ದಾರೆ.
ಡೈನಾಮಿಕ್ ಪ್ರೈಸಿಂಗ್ ಹೆಸರಲ್ಲಿ ಸೀಟ್ ವಂಚನೆ: ಆನ್‌ಲೈನ್‌ನಲ್ಲಿ ರೇಕ್ಲೈನರ್ ಸೀಟ್‌ಗಳಿಗಾಗಿ ₹6,048.94 ಪಾವತಿಸಿದ ಕುಟುಂಬವೊಂದಕ್ಕೆ ಥಿಯೇಟರ್ ತಲುಪಿದಾಗ ₹230 ಮೌಲ್ಯದ ಸಾಮಾನ್ಯ ಆಸನಗಳನ್ನು ನೀಡಿ ದೌರ್ಜನ್ಯ ಎಸಗಿರುವ ಘಟನೆಯನ್ನು ಮೇಯರ್ ಬೆಳಕಿಗೆ ತಂದಿದ್ದಾರೆ.
ಆಹಾರ ಬೆಲೆ ತಪಾಸಣೆ: ಪ್ಯಾಕ್ ಮಾಡಲಾದ ಪದಾರ್ಥಗಳಿಗೆ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (MRP) ಗಿಂತ ಹೆಚ್ಚು ಹಣ ಪಡೆಯಲಾಗುತ್ತಿದೆಯೇ ಮತ್ತು ದರಪಟ್ಟಿ ಪ್ರದರ್ಶಿಸಲಾಗಿದೆಯೇ ಎಂಬುದನ್ನು ತಪಾಸಣೆ ಮಾಡಲಾಗುತ್ತಿದೆ.
ಸಾರ್ವಜನಿಕ ವರದಿ ಸಲ್ಲಿಕೆ: ಈ ತಪಾಸಣೆಗಳ ಕುರಿತು ಪೂರ್ಣ ವರದಿಯನ್ನು ಸಿದ್ಧಪಡಿಸಿ ಶೀಘ್ರದಲ್ಲೇ ಕೇರಳ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





Leave a comment