Home ದಾವಣಗೆರೆ ಆರೋಗ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ ಹೊಸ ಹೆಜ್ಜೆ: ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ 9 ಹೊಸ ಹೆಲ್ತ್ ಸೈನ್ಸ್‌ ಪದವಿ ಕೋರ್ಸ್‌ಗಳ ಶುಭಾರಂಭ!
ದಾವಣಗೆರೆನವದೆಹಲಿಬೆಂಗಳೂರು

ಆರೋಗ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ ಹೊಸ ಹೆಜ್ಜೆ: ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ 9 ಹೊಸ ಹೆಲ್ತ್ ಸೈನ್ಸ್‌ ಪದವಿ ಕೋರ್ಸ್‌ಗಳ ಶುಭಾರಂಭ!

Share
ಆರೋಗ್ಯ
Share

ದಾವಣಗೆರೆ: ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯಪೂರ್ಣ ಹಾಗೂ ವೃತ್ತಿಪರ ಮಾನವ ಸಂಪನ್ಮೂಲವನ್ನು ರೂಪಿಸುವ ಉದ್ದೇಶದಿಂದ ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯವು 2026–27ನೇ ಶೈಕ್ಷಣಿಕ ಸಾಲಿನಿಂದ ಫ್ಯಾಕಲ್ಟಿ ಆಫ್ ಹೆಲ್ತ್ ಅಂಡ್ ಅಲೈಡ್ ಸೈನ್ಸಸ್ (FHAS) ಅಡಿಯಲ್ಲಿ ಒಟ್ಟು 9 ಪದವಿ ಕೋರ್ಸ್‌ಗಳನ್ನು ಆರಂಭಿಸುತ್ತಿದೆ.

ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸೇವಾ ಕ್ಷೇತ್ರದಲ್ಲಿ ವೈದ್ಯಕೀಯ ವೃತ್ತಿಪರರ ಜೊತೆಗೆ ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಆಪ್ಟೋಮೆಟ್ರಿ, ವೈದ್ಯಕೀಯ ಪ್ರಯೋಗಾಲಯ, ಪೌಷ್ಟಿಕತೆ, ಮನೋವಿಜ್ಞಾನ, ವೈದ್ಯಕೀಯ ಇಮೇಜಿಂಗ್, ಅನಸ್ಥೀಷಿಯಾ, ಆಪರೇಷನ್ ಥಿಯೇಟರ್ ಮತ್ತು ಡಯಾಲಿಸಿಸ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ವೃತ್ತಿಪರರ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ ಎಂದು ಜಿ.ಎಂ. ಫಾರ್ಮಸಿಟಿಕಲ್ ಸೈನ್ಸ್ ಅಂಡ್ ರೀಸರ್ಚ್ ಸೆಂಟರ್ ನ ಅಸಿಸ್ಟೆಂಟ್ ಪ್ರೊಫೆಸರ್ ಪ್ರತೀಕ್ಷಾ ಸಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ, ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT) ಕೋರ್ಸ್ ಮೂಲಕ ಗಾಯಗಳು, ದೈಹಿಕ ಚಲನಶೀಲತೆ ಸಮಸ್ಯೆಗಳು, ನೋವು ನಿರ್ವಹಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಅಗತ್ಯವಾದ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ (BOT) ದೈಹಿಕ, ಮಾನಸಿಕ ಅಥವಾ ಅಭಿವೃದ್ಧಿ ಸಂಬಂಧಿತ ಸಮಸ್ಯೆಗಳಿಂದ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸುವವರಿಗೆ ಪುನರ್ವಸತಿ ಮತ್ತು ಸ್ವತಂತ್ರ ಜೀವನಕ್ಕೆ ನೆರವಾಗುವ ಚಿಕಿತ್ಸಾ ವಿಧಾನಗಳ ಕುರಿತು ತರಬೇತಿ ನೀಡಲಿದೆ. ಬ್ಯಾಚುಲರ್ ಆಫ್ ಆಪ್ಟೋಮೆಟ್ರಿ (B.Optom) ಕಣ್ಣಿನ ಆರೋಗ್ಯ, ದೃಷ್ಟಿ ಪರೀಕ್ಷೆ, ದೃಷ್ಟಿದೋಷಗಳ ಪತ್ತೆ ಮತ್ತು ದೃಷ್ಟಿ ಆರೈಕೆಯ ಕ್ಷೇತ್ರದಲ್ಲಿ ಪರಿಣತಿಯನ್ನು ಬೆಳೆಸಲಿದೆ ಎಂದು ವಿವರಿಸಿದರು.

ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬೊರೇಟರಿ ಸೈನ್ಸಸ್ (BMLS) ರಕ್ತ, ಮೂತ್ರ ಮತ್ತು ಇತರ ಕ್ಲಿನಿಕಲ್ ಮಾದರಿಗಳ ಪರೀಕ್ಷೆ ಹಾಗೂ ಪ್ರಯೋಗಾಲಯ ಆಧಾರಿತ ರೋಗನಿರ್ಣಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ನೀಡಲಿದೆ. ಬ್ಯಾಚುಲರ್ ಆಫ್ ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್ (BND) ಆಹಾರ, ಪೌಷ್ಟಿಕಾಂಶ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಜ್ಞಾನವನ್ನು ಒದಗಿಸಲಿದೆ. ಬ್ಯಾಚುಲರ್ ಆಫ್ ಸೈಕಾಲಜಿ (B.Psy) ಮಾನವ ನಡವಳಿಕೆ, ಭಾವನೆಗಳು ಮತ್ತು ಮನೋವೈಜ್ಞಾನಿಕ ಪ್ರಕ್ರಿಯೆಗಳ ಅಧ್ಯಯನಕ್ಕೆ ಒತ್ತು ನೀಡಲಿದ್ದು, ಮುಂದಿನ ಉನ್ನತ ಶಿಕ್ಷಣ ಹಾಗೂ ವಿವಿಧ ವೃತ್ತಿ ಕ್ಷೇತ್ರಗಳಿಗೆ ಉತ್ತಮ ಅಡಿಪಾಯ ಒದಗಿಸಲಿದೆ. ಈ ಮೂರು ಕೋರ್ಸ್‌ಗಳು ಆರೋಗ್ಯ ಸೇವೆ, ಪ್ರಯೋಗಾಲಯ, ಪೌಷ್ಟಿಕತೆ, ಶಿಕ್ಷಣ, ಸಮುದಾಯ ಸೇವೆ ಮತ್ತು ಸಂಶೋಧನಾ ಕ್ಷೇತ್ರಗಳೊಂದಿಗೆ ಸಂಪರ್ಕ ಹೊಂದಿವೆ ಎಂದು ಹೇಳಿದರು.

ಬ್ಯಾಚುಲರ್ ಆಫ್ ಮೆಡಿಕಲ್ ರೇಡಿಯಾಲಜಿ ಅಂಡ್ ಇಮೇಜಿಂಗ್ ಟೆಕ್ನಾಲಜಿ (BMRIT) ಮೂಲಕ ಎಕ್ಸ್-ರೇ, CT, MRI ಸೇರಿದಂತೆ ಆಧುನಿಕ ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನಗಳ ಕುರಿತು ತಾಂತ್ರಿಕ ಹಾಗೂ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಬ್ಯಾಚುಲರ್ ಆಫ್ ಅನಸ್ಥೀಷಿಯಾ ಅಂಡ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ (B.AOTT) ಶಸ್ತ್ರಚಿಕಿತ್ಸಾ ಕೊಠಡಿಯ ಸಿದ್ಧತೆ, ಅನಸ್ಥೀಷಿಯಾ ಪ್ರಕ್ರಿಯೆಗೆ ತಾಂತ್ರಿಕ ಸಹಾಯ, ಉಪಕರಣಗಳ ನಿರ್ವಹಣೆ ಹಾಗೂ ಆಪರೇಷನ್ ಥಿಯೇಟರ್ ಕಾರ್ಯಾಚರಣೆಯಲ್ಲಿ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಲಿದೆ. ಬ್ಯಾಚುಲರ್ ಆಫ್ ಡಯಾಲಿಸಿಸ್ ಥೆರಪಿ ಟೆಕ್ನಾಲಜಿ (BDTT) ಮೂತ್ರಪಿಂಡದ ಕಾರ್ಯಕ್ಷಮತೆ ಕುಂಠಿತಗೊಂಡಿರುವ ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುವಲ್ಲಿ ಅಗತ್ಯವಾದ ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ನೀಡಲಿದೆ ಎಂದರು.

ಅಸಿಸ್ಟೆಂಟ್ ಪ್ರೊಫೆಸರ್ ಮೊಹಮ್ಮದ್ ಯೂಸುಫ್ ಎಂ.ಡಿ ಮಾತನಾಡಿ, ಈ ಎಲ್ಲಾ ಕೋರ್ಸ್‌ಗಳಲ್ಲಿ ತಜ್ಞ ಬೋಧಕ ವೃಂದ, ಆಧುನಿಕ ಮೂಲಸೌಕರ್ಯ, ಪ್ರಾಯೋಗಿಕ ಮತ್ತು ಅನುಭವಾಧಾರಿತ ಕಲಿಕೆ, ಕ್ಲಿನಿಕಲ್ ಎಕ್ಸ್‌ಪೋಶರ್, ಸಂಶೋಧನೆ, ನವೀನತೆ ಹಾಗೂ ಸಮುದಾಯಮುಖಿ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ಕ್ಷೇತ್ರದ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಜ್ಞಾನ, ತಾಂತ್ರಿಕ ಸಾಮರ್ಥ್ಯ, ವೃತ್ತಿಪರ ಕೌಶಲ್ಯ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಜಿಎಂ ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶವಾಗಿದೆ. ಫ್ಯಾಕಲ್ಟಿ ಆಫ್ ಹೆಲ್ತ್ ಅಂಡ್ ಅಲೈಡ್ ಸೈನ್ಸಸ್ ಕೂಡ ವಿದ್ಯಾರ್ಥಿಗಳು ಆರೋಗ್ಯ ಸವಾಲುಗಳನ್ನು ಗುರುತಿಸಿ, ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಹಾಗೂ ಆರೋಗ್ಯ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸುತ್ತದೆ ಎಂದರು.

ಜಿಎಂ ವಿಶ್ವವಿದ್ಯಾಲಯವು ಆರೋಗ್ಯ ಕ್ಷೇತ್ರದಲ್ಲಿ ಹೊಸ ಪೀಳಿಗೆಯ ಸಮರ್ಥ ವೃತ್ತಿಪರರನ್ನು ರೂಪಿಸಲು ಮುಂದಾಗಿದೆ. 2026–27ನೇ ಶೈಕ್ಷಣಿಕ ಸಾಲಿನ ಪ್ರವೇಶಗಳು ಈಗಾಗಲೇ ಆರಂಭವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳು ವಿಶಾಲವಾದ ಅವಕಾಶಗಳನ್ನು ಒದಗಿಸಲಿವೆ. ಪ್ರವೇಶ ಮತ್ತು ಕೋರ್ಸ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಎಂ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು, ಸೀಮಿತ ಸೀಟುಗಳು ಲಭ್ಯವಿದ್ದು, ಇದೇ ಸೆಪ್ಟೆಂಬರ್ 30 ರೊಳಗಾಗಿ ಪ್ರವೇಶಾತಿ ಪಡೆಯಬೇಕು ಎಂದರು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್: “www.gmu.ac.in
ಪ್ರವೇಶ ಸಂಪರ್ಕ: 9364259993, 6364259994
ಇ-ಮೇಲ್: info@gmu.ac.in ಸಂಪರ್ಕಿಸಿ.

ಸುದ್ದಿಗೋಷ್ಠಿಯಲ್ಲಿ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್ ಅಂಡ್ ಪ್ರಮೋಷನ್ ಡೀನ್ ಡಾ. ವೀರಗಂಗಾಧರ್ ಸ್ವಾಮಿ ಟಿ.ಎಂ, ಅಸಿಸ್ಟೆಂಟ್ ಪ್ರೊಫೆಸರ್ ಅನುಷಾ ಬಿ.ಎನ್, ಪಿಆರ್ ಓ ವಸಂತ್ ಕುಮಾರ್ ಜಿ.ಎಸ್ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles